ಜಿಲ್ಲೆ

ಹಗ್ಗದಲ್ಲಿ ಬೈಕ್ ಎಳೆದು ಆಕ್ರೋಶ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡುವ ಮುಖಾಂತರ ಬಡ ಹಾಗೂ ಮಾಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ತೈಲ ಬೆಲೆ ಏರಿಕೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಗುರುವಾರ ನಡೆದ ಹಗ್ಗದಲ್ಲಿ ಬೈಕ್ ಎಳೆದುಕೊಂಡು ತಾಲೂಕು ಕಚೇರಿಗೆ ಆಗಮಿಸಿ ಮಾತನಾಡಿದರು. ಬೆಲೆ ಏರಿಕೆ ಮಾಡಿ ಜನತೆಯ ನಂಬಿಕೆಗೆ ದ್ರೋಹ ಮಾಡಿದೆ. ಎಲ್ಲ ವಲಯಗಳಲ್ಲಿಯೂ ಬೆಲೆ ಏರಿಕೆ ಮಾಡಿ ಬಡವರು, ರೈತರು ಹಾಗೂ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕಿದೆ. ಬರ ಹಾಗೂ ನೆರೆಯಿಂದ ಬೆಳೆಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡದೆ ಬಿತ್ತನೆ ಬೀಜ, ಕೃಷಿ ಪರಿಕರಗಳ ಮೇಲೆ ಇದ್ದ ಸಬ್ಸಿಡಿ ಕಡಿತ ಮಾಡಿ ರೈತರನ್ನು ಹೈರಾಣಾಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಈಗ ಅಧಿಕಾರ ಬಂದ ಕಾಂಗ್ರೆಸ್ ಸರ್ಕಾರ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಐದು ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಆದರೆ ಇವೆಲ್ಲವನ್ನೂ ನೀಡುವಲ್ಲೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಮತ್ತು ಗ್ಯಾರಂಟಿಗಾಗಿ ರೈತರ, ಬಡವರ ವರ್ಗದವರ ಮೇಲೆ ಪ್ರಭಾವ ಬೀರುವಂತೆ ಎಲ್ಲ ವಲಯಗಳಲ್ಲೂ ಬೆಲೆ ಏರಿಕೆ ಮಾಡುವುದರ ಮೂಲಕ ಗ್ಯಾರಂಟಿಗಳನ್ನು ನೀಡುವುದಕ್ಕೆ ಇವರೇ ಆಗಬೇಕಾ? ಕೂಡಲೇ ದರ ಇಳಿಸಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಹಿರೀಕಾಟಿ ಸೋಮಶೇಖರ್, ಅರಕಲವಾಡಿ ನಾಗೇಂದ್ರ, ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷರಾದ ಎಲ್.ಸುರೇಶ್, ಎನ್.ಮಲ್ಲೇಶ್, ಎಸ್.ಸಿ.ಮಂಜುನಾಥ್, ಮಂಚಹಳ್ಳಿ ಬಾಬು, ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಎಪಿಎಂಸಿ ಮಾಜಿ ಅಧ್ಯಕ್ಷ ಕಮರಹಳ್ಳಿ ರವಿ, ಪುರಸಭಾ ಸದಸ್ಯ ನಾಗೇಶ್, ದೇವರಹಳ್ಳಿ ನಾಗೇಂದ್ರ ಇದ್ದರು.