ಗುಂಡ್ಲುಪೇಟೆ : ವಿದ್ಯಾರ್ಥಿಗಳಿಗೆ ತಂಬಾಕು ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುವ ಮೂಲಕ ದುಶ್ಚಟಮುಕ್ತ ಸಮಾಜಕ್ಕಾಗಿ ಶ್ರಮಿಸೋಣ ಎಂದು ಬಾಲನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಕರೆ ನೀಡಿದರು.
ತಾಲೂಕಿನ ತೆರಕಣಾಂಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಡಿ ಬುಧವಾರ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂಬಾಕು ಸೇವನೆಯು ಮನುಷ್ಯನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ಯುವ ಸಮುದಾಯಕ್ಕೆ ಮನಮುಟ್ಟುವಂತೆ ತಿಳಿಸಿ ಹೇಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಯುವ ಪೀಳಿಗೆಯು ತಂಬಾಕಿನ ದುಶ್ಚಟಕ್ಕೆ ಬೀಳುವುದನ್ನು ತಡೆಯುವುದು ಒಂದು ಸವಾಲಾಗಿದ್ದರೆ, ಈಗಾಗಲೇ ಈ ದುಶ್ಚಟಕ್ಕೆ ಒಳಗಾದವರನ್ನು ಅದರಿಂದ ಹೊರತರುವುದು ಇನ್ನೂ ದೊಡ್ಡ ಸವಾಲಿನ ಕೆಲಸವಾಗಿದೆ ಎಂದರು.
ಧೂಮಪಾನಿಗಳ ಸಹವಾಸ, ನಟನಟಿಯರ ಅನುಕರಣೆ, ಧೂಮಪಾನ ಮಾಡುವ ಪಾಲಕರ ಪ್ರಭಾವ, ತಪ್ಪು ಮಾಹಿತಿ ನೀಡುವ ಜಾಹೀರಾತುಗಳ ಕಾರಣಗಳಿಂದ ಯುವ ಜನಾಂಗ ಧೂಮಪಾನದ ಚಟ ಅಂಟಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಅನೇಕ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಯುವಕರು ತುತ್ತಾಗುತ್ತಾರೆ. ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಕುಟುಂಬದವರನ್ನೂ ಈ ಚಟದಿಂದ ದೂರ ಇರಿಸುವ ಉದ್ದೇಶದಿಂದಲಾದರೂ ವಿದ್ಯಾರ್ಥಿಗಳು ತಂಬಾಕು ಅಪಾಯಗಳನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕಿ ಗೀತಾ, ಶಾಲೆಯ ಉಪ ಪ್ರಾಂಶುಪಾಲ ಶ್ರೀನಿವಾಸ್, ಸಹ ಶಿಕ್ಷಕರಾದ ನಾಗರಾಜ ಶರ್ಮಾ, ಮಹೇಶ್, ಇಂದಿರಾ, ಮಲ್ಲುನಾಯಕ, ಹಾಜರಿದ್ದರು.