ಚಾಮರಾಜನಗರ : ನಗರದ ಜಾಲಹಳ್ಳಿಹುಂಡಿ ಸಮೀಪ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಗರದ 17ನೇ ವಾರ್ಡ್‌ನ ಉಪ್ಪಾರ ಬಡಾವಣೆ ನಿವಾಸಿ, ಪ್ರಸ್ತುತ ಜಾಲಹಳ್ಳಿಹುಂಡಿಯಲ್ಲಿ ವಾಸವಾಗಿದ್ದ ಕೃಷ್ಣ ಅವರ ಪುತ್ರ ಮೋಹನ್(27) ಮೃತ ದುರ್ದೈವಿ. ನಗರದ ಜಿಮ್‌ವೊಂದರಲ್ಲಿ ಮೋಹನ್ ಮಂಗಳವಾರ ರಾತ್ರಿ ಅಭ್ಯಾಸ ಮುಗಿಸಿ ಸ್ನೇಹಿತ ಮನೋಹರ್ ಬೈಕ್‌ನಲ್ಲಿ ಜಾಲಹಳ್ಳಿಹುಂಡಿಗೆ ತೆರಳುತ್ತಿದ್ದ. ಈ ವೇಳೆ ಗ್ರಾಮದ ಕಡೆಗೆ ಬೈಕ್ ತಿರುಗಿಸುವ ಸಂದರ್ಭದಲ್ಲಿ ಚಾಮರಾಜನಗರದ ಕಡೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಮೋಹನ್ ಕೆಳಗೆ ಬಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬೈಕ್ ಓಡಿಸುತ್ತಿದ್ದ ಮನೋಹರ್ ಹಾಗೂ ಮತ್ತೊಂದು ಬೈಕ್ ಚಲಾಯಿಸುತ್ತಿದ್ದ ರಾಮಸಮುದ್ರ ಬಡಾವಣೆಯ ಮಹೇಶ್ ಅವರಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರ ಠಾಣೆ ಪೊಲೀಸರು ಮೋಹನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಬಳಿಕ ಕುಟುಂಬದವರಿಗೆ ಮೃತದೇಹವನ್ನು ಒಪ್ಪಿಸಿದರು. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.