ಹನೂರು; ಜಾಬ್ ಕಾರ್ಡ್ ಹೊಂದಿರುವವರಿಗೆ ಕಡ್ಡಾಯವಾಗಿ ವರ್ಷದಲ್ಲಿ 100 ದಿನ ಉದ್ಯೋಗ ನೀಡುವ ಮೂಲಕ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷೃ ಸಲ್ಲದು ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸೂಚಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಹನೂರು ಭಾಗದ ಕೆಲವು ಗ್ರಾಮಗಳಲ್ಲಿ ಜನರು ಕೂಲಿ ಇಲ್ಲದೆ ಉದ್ಯೋಗ ಹರಸಿ ಕೇರಳ ಹಾಗೂ ತಮಿಳುನಾಡಿಗೆ ಗುಳೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಿರುವಾಗ ಜನರಿಗೆ ನರೇಗಾ ಯೋಜನೆಯಡಿ ಸಮರ್ಪಕವಾಗಿ ಉದ್ಯೋಗ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ? ಜತೆಗೆ ನರೇಗಾ ಯೋಜನೆಯಡಿ ಶೆಟ್ಟಳ್ಳಿ, ಮಿಣ್ಯಂ ಹಾಗೂ ತಾಲೂಕಿನ ಇತರ ಗ್ರಾಪಂಗಳಲ್ಲಿ ಗುರಿಗಿಂತ ಸಾಧನೆ ಕಡಿಮೆ ಇದೆ. ಆದ್ದರಿಂದ ಕೆರೆ ಅಭಿವೃದ್ಧಿ, ನಾಲೆ ಹೂಳೆತ್ತುವುದು, ರಸ್ತೆ ನಿರ್ಮಾಣ, ಶಾಲಾಭಿವೃದ್ಧಿ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜನರಿಗೆ ಉದ್ಯೋಗ ನೀಡಿ ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದರು.
ಈ ಸಂಬಂಧ ಅಗತ್ಯ ಕ್ರಮವಹಿಸಿ ಕ್ರಿಯಾ ಯೋಜನೆ ತಯಾರಿಸಿ ಒಂದು ತಿಂಗಳೊಳಗೆ ಕಾಮಗಾರಿಗಳನ್ನು ಕೈಗೊಳ್ಳುವುದರ ಜತೆಗೆ ನಿರಂತರತೆಯನ್ನು ಕಾಯ್ದುಕೊಂಡು ಜನರಿಗೆ ಅನುಕೂಲ ಕಲ್ಪಿಸಬೇಕು. ಅಲ್ಲದೆ ವೈಯಕ್ತಿಕ ಕಾಮಗಾರಿಗಳನ್ನು ಪ್ರತಿ ವರ್ಷ ಒಬ್ಬರಿಗೆ ನೀಡದೆ ಇತರರಿಗೂ ಅವಕಾಶ ಕಲ್ಪಿಸಬೇಕು. ಆ ಮೂಲಕ ಪ್ರತಿಯೊಬ್ಬರೂ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಮರ್ಪಕ ಮಾಹಿತಿ ನೀಡುವಂತೆ ಸೂಚನೆ
ನರೇಗಾ ಯೋಜನೆಯಡಿ ಸಾಧಿಸಿರುವ ಪ್ರಗತಿ ಬಗ್ಗೆ ಪಿಡಿಒಗಳಿಂದ ಮಾಹಿತಿ ಪಡೆಯಲಾಗುತ್ತಿತ್ತು. ಆದರೆ ಬಹುತೇಕ ಪಿಡಿಒಗಳು ಸಮರ್ಪಕ ಮಾಹಿತಿ ನೀಡುವ ಬದಲಾಗಿ ಸಾಮಾನ್ಯ ಮಾಹಿತಿ ತಿಳಿಸುತ್ತಿದ್ದರು. ಇದರಿಂದ ಗರಂ ಆದ ಡಿಸಿ, ಬಾಯಿಗೆ ಬಂದಂತೆ ಮಾಹಿತಿ ನೀಡಬೇಡಿ. ಸಾಮಾನ್ಯವಾಗಿ ಮಾಹಿತಿ ನೀಡಿದರೆ ಏನು ಪ್ರಯೋಜನ? ಆದ್ದರಿಂದ ಅಂಕಿ-ಅಂಶದ ಸಮೇತ ಮಾಹಿತಿ ನೀಡಬೇಕು. ಕೈಗೊಂಡಿರುವ ಪ್ರಗತಿಯ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು. ಈ ಬಗ್ಗೆ ತಿಳಿಸುವಂತೆ ತಾಪಂ ಸಹಾಯಕ ನಿರ್ದೇಶಕ ರವೀಂದ್ರ ಅವರಿಗೆ ಸೂಚಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆ, ಹಾಸ್ಟೆಲ್‌ನಲ್ಲಿ ಕೈ ತೋಟ ನಿರ್ಮಿಸಿ
ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕಿ ವಿನುತಾ ಅವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ವೈಯಕ್ತಿಕ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನರೇಗಾ ಯೋಜನೆಯಡಿ ಶಾಲೆ ಹಾಗೂ ಹಾಸ್ಟೆಲ್ ಆವರಣದಲ್ಲಿ ಹಣ್ಣು ಹಾಗೂ ತರಕಾರಿ ಬೆಳೆ ಬೆಳೆಯಲು ಕ್ರಮವಹಿಸಬೇಕು. ಇದರಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ಅನುಕೂಲವಾಲಿದೆ. ಈ ಸಂಬಂಧ ಒಂದು ವಾರದೊಳಗೆ ಕ್ರಿಯಾಯೋಜನೆ ಸಲ್ಲಿಸಿ ವರದಿ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜನರಿಗೆ ಉದ್ಯೋಗ ನೀಡಿ
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಮಿಣ್ಯಂ, ಹೂಗ್ಯಂ, ಮಾರ್ಟಳ್ಳಿ ಭಾಗದಲ್ಲಿ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಉದ್ಯೋಗಕ್ಕೆ ಜನರಿಂದ ಹೆಚ್ಚಿನ ಬೇಡಿಕೆ ಇದೆ. ಆದರೆ ಉದ್ಯೋಗ ಸಿಗದ ಹಿನ್ನೆಲೆ ಜನರು ಗುಳೆ ಹೋಗುತ್ತಿದ್ದಾರೆ. ಉದ್ಯೋಗ ಕೊಡಿಸುವಂತೆ ಜನರು ನಮ್ಮ ಬಳಿ ಆಗಮಿಸಿ ಅಳಲು ತೋಡಿಕೊಂಡಿದ್ದಾರೆ. ಹಾಗಾಗಿ ಪಿಡಿಒಗಳು ಈ ಬಗ್ಗೆ ಗಮನಹರಿಸಿ ಉದ್ಯೋಗ ನೀಡಬೇಕು ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ, ಕೃಷಿ, ಅರಣ್ಯ ಹಾಗೂ ಇತರ ಇಲಾಖೆಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆ ನೀಡಲಾಯಿತು. ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸಿಎಫ್ ಚಂದ್ರಶೇಖರ ಪಾಟೀಲ್, ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಗ್ರೇಡ್ 2 ತಹಸೀಲ್ದಾರ್ ಧನಂಜಯ, ಬಿಇಒ ಮಹೇಶ್, ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಪಿಡಬ್ಲೂೃಡಿ ಎಇಇ ಪುರುಷೋತ್ತಮ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.