ಜಿಲ್ಲೆ

ಮಹಿಳೆಗೆ ಷರತ್ತು ಹಾಕುವುದು ಸರಿಯಲ್ಲ

reportermys

ಚಾಮರಾಜನಗರ: ರೋಟರಿ ಸಂಸ್ಥೆ ಹಾಗೂ ಇನ್ನರ್‌ವ್ಹೀಲ್ ಸಂಸ್ಥೆ ವತಿಯಿಂದ 70 ವರ್ಷದ ವೃದ್ಧೆ ಹಾಗೂ ಬಾಲಾಶ್ರಮದ ಮಾತಾಜಿ ಚಂದ್ರಕಲಾಬಾಯಿ ಅವರನ್ನು ಗೌರವಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ನಗರದ ರೋಟರಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಕಾಗಲವಾಡಿ ಮೋಳೆಯಲ್ಲಿ ತಾಯಿ ಕಳೆದಕೊಂಡ ಮದನ್‌ಕುಮಾರ್‌ನನ್ನು ಕಳೆದ 12 ವರ್ಷದಿಂದ ಪಾಲನೆ ಮಾಡುತ್ತಿರುವ ಆತನ ಅಜ್ಜಿ 70 ವರ್ಷದ ಮಹದೇವಮ್ಮ ಹಾಗೂ ನಗರದ ಪಾರ್ವತಿ ಸೇವಾ ಬಾಲಾಶ್ರಮದ ಮಾತಾಜಿ ಚಂದ್ರಕಲಾಬಾಯಿ ಅವರನ್ನು ಸನ್ಮಾನಿಸಿ ಧನ ಸಹಾಯ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.


ಇನ್ನರ್‌ವ್ಹೀಲ್ ಸಂಸ್ಥೆಯ ಲಕ್ಷ್ಮೀ ಮಾತನಾಡಿ, ಮಹಿಳೆಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಏನಾದರೊಂದು ಸಾಧಿಸುವ ಛಲ ಹೊಂದಿರುವ ಮಹಿಳೆಗೆ ಸಮಾಜ ಷರತ್ತು ಹಾಕುವುದು ಸರಿಯಲ್ಲ. ಇಂದು ಮಹಿಳೆ ನಾಲ್ಕುಗೋಡೆಗೆ ಸೀಮಿತವಾಗದೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿ ತೋರಿಸುತ್ತಿದ್ದಾಳೆ ಎಂದರು.


ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಎಂ. ಮಹದೇವಸ್ವಾಮಿ ಮಾತನಾಡಿ, ಇತಿಹಾಸ ಮತ್ತು ಸಮಕಾಲೀನ ಸಮಾಜದಲ್ಲಿನ ಘಟನೆಗಳಿಗೆ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸುವ ದಿನವೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಪರಿಗಣಿಸಿ ಸನ್ಮಾನಿಸಲಾಗುತ್ತದೆ. ಮಹಿಳೆಯರು ಅಬಲೆಯಲ್ಲ; ಸಬಲೆಯಾಗಿದ್ದಾರೆ ಎಂದರು.


ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರಿಗೆ ಒಂದು ನಿಮಿಷ ಕಾಲ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು. ರೋಟರಿ ಉಪಾಧ್ಯಕ್ಷ ಎಲ್. ನಾಗರಾಜು, ಬಿ.ಕೆ. ಮೋಹನ್, ಸಿದ್ದರಾಜು, ಅಂಕಶೆಟ್ಟಿ ಇತರರು ಇದ್ದರು.