ಚಾಮರಾಜನಗರ: ಮಾನಕ್ಕೆ ಅಂಜಿ ಮಲೆಮಹದೇವಶ್ವರ ಬೆಟ್ಟದ ತಾಳಬೆಟ್ಟದ ಬಳಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಸಂತ್ರಸ್ಥರನ್ನು ವಾಲ್ಮೀಕಿಪೀಠದ ಶ್ರೀವಾಲ್ಮೀಕಿ ಪ್ರಸನ್ನಾನಂದಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈಸೂರು ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಮೃತ ಮಹದೇವನಾಯಕರ ಪತ್ನಿ ಗೌರಮ್ಮ, ಮೊಮ್ಮಗಳನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠದ ಶ್ರೀವಾಲ್ಮೀಕಿ ಪ್ರಸನ್ನಾನಂದಸ್ವಾಮೀಜಿ ಭಾನುವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿ ಕುಟುಂಬಕ್ಕೆ ಧೈರ್ಯ ತುಂಬಿದರು. ಶ್ರೀಮಠದ ವತಿಯಿಂದ ಮಠದ ಧರ್ಮದರ್ಶಿಯಾದ ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಅವರ ಮೂಲಕ ಸಂತ್ರಸ್ಥರ ಕುಟುಂಬಕ್ಕೆ 50 ಸಾವಿರ ರೂ. ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ಶ್ರೀವಾಲ್ಮೀಕಿ ಪ್ರಸನ್ನಾನಂದಸ್ವಾಮೀಜಿ ಮಾತನಾಡಿ, ಈ ಪ್ರಕರಣದಲ್ಲಿ ಮಹದೇವನಾಯಕ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಮಗಳು ಲೀಲಾವತಿ ಮೃತಪಟ್ಟಿರುವುದು ವಿಷಾಧಕರ ಸಂಗತಿಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತ ಮಹದೇವನಾಯಕರ ಪತ್ನಿ ಗೌರಮ್ಮ, ಮೊಮ್ಮಗಳು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದರು.
ಕೆ.ಆರ್.ನಗರ ಶಾಸಕ ರವಿಶಂಕರ್ ಮಾತನಾಡಿ, ಈಗಾಗಲೇ ಸರ್ಕಾರದಿಂದ ಸಂತ್ರಸ್ಥರಿಗೆ ಪರಿಹಾರ ಕೊಡಿಸಿದ್ದು, ಮುಂದಿನ ದಿನಗಳಿಗೆ ಮೃತ ಮಹದೇವನಾಯಕರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಎಲ್ಲ ರೀತಿಯ ನೆರವು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ವೇಳೆ ಮಲ್ಲಿಕಾರ್ಜುನಸ್ವಾಮೀಜಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ, ತಾ.ಪಂ.ಮಾಜಿ ಅಧ್ಯಕ್ಷ ಎಚ್.ವಿ.ಚಂದ್ರು, ಮುಖಂಡ ಪು.ಶ್ರೀನಿವಾಸನಾಯಕ, ಕಪಿನಿನಾಯಕ, ಜ.ಸುರೇಶ್‌ನಾಗ್, ಜಯಸುಂದರ್, ನಾಗೇಂದ್ರನಾಯಕ, ಕೃಷ್ಣನಾಯಕ, ಶಿವುವಿರಾಟ್, ಮಾದೇಶ್, ವೆಂಕಟೇಶ್ ನಾಯಕ ಹಾಜರಿದ್ದರು.