ಜಿಲ್ಲೆ

ಎಎಸ್‌ಐ, ಕಾನ್‌ಸ್ಟೇಬಲ್ ಅಮಾನತು

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು ಭೇಟಿಯಾಗಿದ್ದ ಆರೋಪದಡಿ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ಹಾಗೂ ಕಾನ್‌ಸ್ಟೇಬಲ್‌ರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಆದೇಶ ಹೊರಡಿಸಿದ್ದಾರೆ.

ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ನಟರಾಜು, ಕಾನ್‌ಸ್ಟೇಬಲ್ ಸೋಮಶೇಖರ್ ಅಮಾನತುಗೊಂಡವರು. ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವೊಂದರಲ್ಲಿ ಚಾಮರಾಜನಗರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರದೀಪ್ ಅಲಿಯಾಸ್ ಮಲ್ಲೇಶ್ ಎಂಬ ಆರೋಪಿಯನ್ನು ನಟರಾಜು, ಸೋಮಶೇಖರ್ ಅವರು ಮೈಸೂರಿನ ಪೊಲೀಸರೆಂದು ಹೇಳಿಕೊಂಡು ಸಮವಸ್ತ್ರದಲ್ಲೇ ಭೇಟಿಯಾಗಿದ್ದರು.

ಈ ವಿಚಾರ ತಿಳಿದ ಎಸ್‌ಪಿ ಪದ್ಮಿನಿ ಸಾಹು ಅವರು ಈ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಅಗರ-ಮಾಂಬಳ್ಳಿ ಪೊಲೀಸ್ ಠಾಣಾಧಿಕಾರಿಗೆ ಸೂಚನೆ ನೀಡಿದ್ದರು. ಎಸ್‌ಪಿ ಆದೇಶದಂತೆ ತನಿಖೆ ನಡೆಸಿ ಸಿಸಿ ಟಿವಿ ದೃಶ್ಯಾವಳಿ ಸಮೇತ ವರದಿ ನೀಡಿದ್ದರು. ಈ ವರದಿ ಆಧರಿಸಿ ಈ ಇಬ್ಬರನ್ನು ಅಮಾನತುಗೊಳಿಸಿದ್ದಾರೆ.