ಚಾಮರಾಜನಗರ: ಬದನಗುಪ್ಪೆ-ಕೆಲ್ಲಂಬಳ್ಳಿ ಎರಡನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮುಂದಾಗಿದ್ದು, ಈ ಭಾಗದಲ್ಲಿ ಬರುವ ಕೆರೆ-ಕಟ್ಟೆ, ಗೋಮಾಳಗಳು ಯಾರ ಪಾಲಾಗುತ್ತದೆ ಎಂಬ ಪ್ರಶ್ನೆ ಎದುರಾಗಿದೆ.
ಜಿಲ್ಲೆಯಲ್ಲಿ ಕೈಗಾರಿಕೆ ವಲಯವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಅಂದಿನ ರಾಜ್ಯ ಸರ್ಕಾರ 2014 ರಲ್ಲಿ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕೆ ಪ್ರದೇಶ ನಿರ್ಮಾಣ ಮಾಡಲು ಮುಂದಾಯಿತು. ಅದರಂತೆ ಮೊದಲ ಹಂತದ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಕೆಐಎಡಿಬಿ 1500 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಈ ಪೈಕಿ 400 ಎಕರೆ ಸರಕಾರಿ ಭೂಮಿ ಹೊರತಾಗಿ ಇನ್ನುಳಿದ ರೈತರ ಜಮೀನಿಗೆ ತಲಾ 20 ಲಕ್ಷ ರೂ. ಪರಿಹಾರ ಮೊತ್ತ ನೀಡಿ ಭೂಮಿಯನ್ನು ಖರೀದಿಸಲಾಗಿತ್ತು.
ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶವನ್ನು ಇನ್ನಷ್ಟು ವಿಸ್ತರಿಸುವುದಕ್ಕಾಗಿ, ಅಭಿವೃದ್ಧಿ ಪಡಿಸಲಾಗಿರುವ ಪ್ರದೇಶಕ್ಕೆ ಹೊಂದಿಕೊಂಡಂತೆ 1,189.09 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿತ್ತು.ಈಗಾಗಲೇ ರೈತರಿಂದ ವಶಪಡಿಸಿಕೊಂಡ ಜಮೀನುಗಳಿಗೆ ಪರಿಹಾರ ಮೊತ್ತವನ್ನು ನಿರ್ಧರಿಸಿ, ಪರಿಹಾರ ಹಣವನ್ನು ವಿತರಣೆ ಮಾಡಲು ಕೆಐಎಡಿಬಿ ಮುಂದಾಗಿದೆ. ಈ ಸಂದರ್ಭದಲ್ಲಿ ಎರಡನೇ ಹಂತದಲ್ಲಿ ವಶಪಡಿಕೊಂಡಿರುವ ಜಮೀನುಗಳ ನಡುವೆ ಕಂಡುಬರುವ ಕೆರೆ-ಕಟ್ಟೆಗಳ ಜಾಗ, ಸರ್ಕಾರಿ ರಸ್ತೆಗಳು, ಗೋಮಾಳ, ಹುಲಬನ್ನಿ ಕರಾಬು, ಸರ್ಕಾರಿ ತೋಪುಗಳು ಹಾಗೂ ಇನ್ನಿತರೆ ಸರ್ಕಾರಿ ಜಾಗ ಯಾರ ಪಾಲಾಗಲಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಈಗಾಗಲೇ ಈ ಕುರಿತು ಸ್ಥಳೀಯರು ಕೆಐಎಇಡಿಬಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಯಾರ ಬಳಿಯೂ ಉತ್ತರ ದೊರೆಯದೇ ಸರ್ಕಾರಿ ಜಮೀನು ಹಾಗೂ ಗೋಮಾಳಗಳು ಸೂಕ್ತ ರೀತಿಯಲ್ಲಿ ಸಂರಕ್ಷಣೆಯಾಗದೇ ಖಾಸಗಿ ಕಂಪನಿಗಳು ಹಾಗೂ ಉಳ್ಳವರ ಪಾಲಾಗುವುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಅಧಿಕಾರಿಗಳಿಂದ ಉತ್ತರವಿಲ್ಲ:
ಎರಡನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ರೈತರಿಂದ ವಶಪಡಿಸಿಕೊಂಡ ಜಮೀನನ್ನು ಹೊರತುಪಡಿಸಿ ಕೆರೆ-ಕಟ್ಟೆಗಳು, ಸರ್ಕಾರಿ ರಸ್ತೆ, ರೈತರು ದನ-ಕರುಗಳನ್ನು ಮೇಯಿಸಲು ಬಳಕೆ ಮಾಡುತ್ತಿದ್ದ ಗೋಮಾಳದ ಜಾಗ, ಹುಲಬನ್ನಿ ಕರಾಬು, ಸರ್ಕಾರಿ ತೋಪು ಮತ್ತು ಇನ್ನಿತರೆ ಸರ್ಕಾರಿ ಜಾಗವನ್ನು ಯಾರು ಸಂರಕ್ಷಣೆ ಮಾಡುತ್ತಾರೆ. ಖಾಸಗಿ ಕಂಪನಿಗಳು ಕೈಗಾರಿಕೆ ನಿರ್ಮಾಣ ಮಾಡಿರುವ ವ್ಯಾಪ್ತಿಯಲ್ಲೇ ಇವು ಬರುವುದರಿಂದ ಅದು ಯಾರ ಪಾಲಾಗುತ್ತದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇಲ್ಲಿ ಕೈಗಾರಿಕೆ ನಿರ್ಮಾಣ ಮಾಡಲು ಕಂದಾಯ ಇಲಾಖೆಯ ಅನುಮತಿ ಇದೆಯೇ ಎಂದು ರೈತರು ಇಲಾಖೆಯನ್ನು ಪ್ರಶ್ನಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಕೆಐಡಿಎಬಿ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ, ಕೆಐಡಿಎಬಿ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಎನ್ನುತ್ತಾರೆಯೇ ಹೊರತು, ಈ ವರೆಗೂ ಯಾರಲ್ಲೂ ಸ್ಪಷ್ಟ ಉತ್ತರ ದೊರೆತಿಲ್ಲ. ಆಗಾಗಿ ಸರ್ಕಾರಿ ಜಾಗ ಹಾಗೂ ಗೋಮಾಳಗಳ ಸಂರಕ್ಷಣೆ ಯಾರು ಮಾಡುತ್ತಾರೆ ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದು ಕೆಲ್ಲಂಬಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್ ಅವರು ವಿಜಯವಾಣಿ ಜತೆಗೆ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ರೈತರಿಗೆ ಪರಿಹಾರ ವಿತರಣೆ:
ಎರಡನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಭೂಮಿಯನ್ನು ನೀಡಿದ ರೈತರಿಗೆ ಎಕರೆಗೆ ತಲಾ 43 ಲಕ್ಷ ರೂ, ಹಣವನ್ನು ನಿಗದಿ ಮಾಡಿ ಪರಿಹಾರವನ್ನು ವಿತರಣೆ ಮಾಡಲು ಮುಂದಾಗಿದೆ. ಈಗಾಗಲೇ ಕಂದಾಯ ಇಲಾಖೆ ರೈತರಿಂದ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಭಾಗದ ರೈತರು ಎರಡನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಕೆಐಡಿಎಬಿ ಹೊರಡಿಸಿದ್ದ ಭೂ ಸ್ವಾಧೀನ ಅಧಿಸೂಚನೆ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದರು. ಅದಲ್ಲದೇ ಎಕರೆಗೆ 1.5 ಕೋಟಿ ರೂ, ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದರು. ಕೆಐಎಡಿಬಿ ಕೊನೆಗೂ ಎಕರೆಗೆ 43 ಲಕ್ಷ ರೂ. ನಿಗದಿ ಮಾಡಿದ್ದು, ಪರಹಾರ ಹಣವನ್ನು ರೈತರಿಗೆ ವಿತರಣೆ ಮಾಡಲು ಮುಂದಾಗಿದೆ.
ಸ್ಮಶಾನವಿಲ್ಲದ ಗ್ರಾಮ:
ಎರಡನೇ ಹಂತದ ಕೈಗಾರಿಕೆ ಅಭಿವೃದ್ಧಿಗೆ ಜಮೀನು ನೀಡಿರುವ ಕೆಲ್ಲಂಬಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ದಲಿತ ಸಮುದಾಯ ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತವಾದ ಸ್ಮಶಾನ ಇಲ್ಲದಂತಾಗಿದೆ. ಅದಲ್ಲದೇ ಈಗಾಗಲೇ ಕೈಗಾರಿಕೆ ಪ್ರದೇಶ ಎಂದು ನಿಗದಿಯಾಗಿರುವ ಜಾಗದಲ್ಲಿ ಅಕ್ರವಾಗಿ ಮಣ್ಣು ತುಂಬುವ ಕೆಲಸಗಳು ನಡೆಯುತ್ತಿದೆ. ಕೆರೆ-ಕಟ್ಟೆ, ಗೋಮಾಳಗಳು ಸೂಕ್ತ ರೀತಿಯಲ್ಲಿ ರಕ್ಷಣೆಯಾಗುತ್ತಿಲ್ಲ. ಹೆಚ್ಚಿನ ಹಣ ನೀಡಿ ಭೂಮಿಯನ್ನು ಖರೀದಿ ಮಾಡುತ್ತಿರುವುದುರಿಂದ ಹಲವು ಜನರು ಅನಧಿಕೃತವಾಗಿ ಸರ್ಕಾರಿ ಜಮೀನುಗಳನ್ನು ಪರಭಾರೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮವಹಿಸಿ ಸರ್ಕಾರಿ ಭೂಮಿಯ ಸಂರಕ್ಷಣೆ ಮಾಡಬೇಕು, ಕೈಗಾರಿಕೆ ಪ್ರದೇಶಕ್ಕೆ ಜಮೀನು ನೀಡಿರುವ ಗ್ರಾಮಗಳಿಗೆ ಸೂಕ್ತ ರೀತಿಯಲ್ಲಿ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಸಮಾಜಿಕ ಕಾರ್ಯಕರ್ತ ಕೆಲ್ಲಂಬಳ್ಳಿ ಮಹೇಶ್ ಅವರು ಒತ್ತಾಯಿಸಿದ್ದಾರೆ.
ಕೈಗಾರಿಕೆ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗ, ಗೋಮಾಳಗಳನ್ನು ಸಂರಕ್ಷಣೆ ಮಾಡಬೇಕು ಎಂದು ಈಗಾಗಲೇ ಸಾಕಷ್ಟು ಮನವಿಯನ್ನು ಸಲ್ಲಿಸಿದ್ದೇವೆ. ಜನಸ್ಪಂದನಾ ಕಾರ್ಯಕ್ರಮದಲ್ಲೂ ಸಚಿವರ ಗಮನಕ್ಕೆ ತರಲಾಗಿದೆ. ಆದರೆ ಈ ವರೆಗೂ ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.-ಸೋಮಶೇಖರ್, ಗ್ರಾ.ಪಂ ಸದಸ್ಯ, ಕೆಲ್ಲಂಬಳ್ಳಿ ಎರಡನೇ ಹಂತದಲ್ಲಿ ಪಾರದರ್ಶಕವಾಗಿ ರೈತರಿಗೆ ಪರಿಹಾರ ವಿತರಣೆಗೆ ಸೂಚನೆ ನೀಡಲಾಗಿದೆ. ಕೈಗಾರಿಕೆ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆರೆ-ಕಟ್ಟೆ ಹಾಗೂ ಗೋಮಾಳಗಳ ಸಂರಕ್ಷಣೆಯನ್ನು ಹಂತಹಂತವಾಗಿ ಮಾಡುತ್ತೇವೆ. ಈ ಭಾಗದಲ್ಲಿ ಅಂತರ್ಜಲ ವೃದ್ಧಿಗೂ ಕ್ರಮವಹಿಸಲಾಗಿದೆ. ಸರ್ಕಾರಿ ಜಾಗವನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ.-ಶಿಲ್ಪನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ