ಜಿಲ್ಲೆ

ಫಸಲು ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ಕ್ರಮ

ಹನೂರು: ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟವಾಗಿರುವ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಮಾಜಿ ಶಾಸಕ ಆರ್.ನರೇಂದ್ರ ಭರವಸೆ ನೀಡಿದರು.

ತಾಲೂಕಿನ ಲೊಕ್ಕನಹಳ್ಳಿ ಬಳಿಯ ಆಂಡಿಪಾಳ್ಯದ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಟ್ಟು ಫಸಲನ್ನು ನಾಶಗೊಳಿಸಿರುವ ಹಿನ್ನೆಲೆಯಲ್ಲಿ ಆ ಜಮೀನುಗಳಿಗೆ ಶುಕ್ರವಾರ ತೆರಳಿ ರೈತರಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಈ ಹಿಂದೆ ಕಾಡು ಪ್ರಾಣಿಗಳು ಹೆಚ್ಚು ಜಮೀನುಗಳಿಗೆ ಲಗ್ಗೆ ಇಡುತ್ತಿರಲಿಲ್ಲ. ಇದರಿಂದ ರೈತರು ನೆಮ್ಮದಿಯಿಂದ ಕೃಷಿ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಗಳು ಜಮೀನುಗಳಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಜತೆಗೆ ಬೆಳೆ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ರೈತರು ಮಾತನಾಡಿ, ಕಳೆದ ಒಂದು ವಾರದಿಂದ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಜಮೀನುಗಳಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ರಾತ್ರಿ ವೇಳೆ ಓಡಾಡಲು ಜೀವ ಭಯದ ಆತಂಕ ಎದುರಾಗಿದೆ. ಹಾಗಾಗಿ, ಕಾಡುಪ್ರಾಣಿಗಳ ಸಮಸ್ಯೆ ತಪ್ಪಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಗದೀಶ್, ರಾಜು, ಸತೀಶ್, ಬಾಲು, ಸೆಂದಿಲ್, ಕೃಷ್ಣ ಹಾಗೂ ಇನ್ನಿತರರು ಇದ್ದರು.