ಜಿಲ್ಲೆ

ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ

ಯಳಂದೂರು: ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಪರಿವರ್ತಿಸಲು ಬಜೆಟ್‌ನಲ್ಲಿ ಅನುಮೋದನೆ ದೊರಕಿದ್ದು, ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಭೂಮಿಪೂಜೆ ನೆರವೇರಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆರಂಭಗೊಂಡ ನೂತನ ಡಯಾಲಿಸ್ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಪ್ರಥಮ ವಿಧಾನಸಭಾ ಕ್ಷೇತ್ರವಾಗಿದ್ದ ಯಳಂದೂರಿನಲ್ಲಿ ನಮ್ಮ ತಂದೆ ಬಿ. ರಾಚಯ್ಯ ಜಯಶೀಲರಾಗಿದ್ದರು. ಹಾಗಾಗಿ ಈ ಊರಿನ ಬಗ್ಗೆ ನನಗೆ ವಿಶೇಷ ಆಸಕ್ತಿ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಳಂದೂರು ಪಟ್ಟಣಕ್ಕೆ 100 ಹಾಸಿಗೆಗಳ ಆಸ್ಪತ್ರೆಗೆ ಕಳೆದ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ಟೆಂಡರ್ ಕರೆದು ಭೂಮಿಪೂಜೆಗೆ ಸಚಿವ ದಿನೇಶ್ ಗುಂಡೂರಾವ್ ಜತೆ ಚರ್ಚಿಸಿದ್ದು, ಅವರು ಸ್ಪಂದಿಸಿದ್ದಾರೆ. ಒಟ್ಟು 36 ಕೋಟಿ ರೂ. ವೆಚ್ಚದಲ್ಲಿ ನೆಲಮಹಡಿ ಕಟ್ಟಡದ ಕಾಮಗಾರಿ ಆದಷ್ಟು ಬೇಗ ಆರಂಭಗೊಳ್ಳಲಿದ್ದು, ಇಲ್ಲಿನ ಅನೇಕ ವರ್ಷಗಳ ಬೇಡಿಕೆ ಈಡೇರಲಿದೆ ಎಂದು ತಿಳಿಸಿದರು.

ಕೊಳ್ಳೇಗಾಲದಲ್ಲಿ ಇತ್ತೀಚೆಗೆ ನಡೆದ ಬೃಹತ್ ಆರೋಗ್ಯ ಮೇಳದಲ್ಲಿ 12,004 ಮಂದಿ ತಪಾಸಣೆಗೆ ಒಳಪಟ್ಟು, ಇದರಲ್ಲಿ 266 ಮಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ರಾಜ್ಯದ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದ ಯಶಸ್ವಿ ಆರೋಗ್ಯ ಮೇಳ ನಡೆದಿರುವುದು ದಾಖಲೆಯಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಳ್ಳೇಗಾಲ ವಿಭಾಗೀಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವಿದ್ದು, ಇದರಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿತ್ತು. 58 ಜನ ನೋಂದಣಿ ಮಾಡಿಸಿಕೊಂಡು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಒತ್ತಡ ಹೆಚ್ಚಿದ್ದರಿಂದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಸಹಯೋಗದೊಂದಿಗೆ ಯಳಂದೂರಿನಲ್ಲಿ 2 ಯಂತ್ರಗಳ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದೆ. ಮುಂದೆ ಸಿಎಸ್‌ಆರ್ ಯೋಜನೆಯಡಿ ಇನ್ನಷ್ಟು ಯಂತ್ರಗಳ ಖರೀದಿಗೆ ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಗೌಡಹಳ್ಳಿ, ಹೊನ್ನೂರು, ಮಾಂಬಳ್ಳಿ, ಚಿಲಕವಾಡಿ, ಹೊಂಗನೂರು, ಇರಸವಾಡಿ, ಉಮ್ಮತ್ತೂರು, ಕುದೇರು, ಬಾಗಳಿ ಕಜ್ಜಿಹುಂಡಿ, ಟಿ.ಹೊಸೂರು ಗ್ರಾಮಗಳ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ, ನವೀಕರಣ, ಶೌಚಗೃಹ, ಶೆಲ್ಟರ್ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗಳಿಗೆ ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ಹಣ ನಿಯೋಜಿಸಲು ಯೋಜನೆ ರೂಪಿಸಲಾಗಿದ್ದು, ಆದಷ್ಟು ಬೇಗ ಕಾಮಗಾರಿ ನಡೆಯಲಿದೆ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಬಸ್ ನಿಲ್ದಾಣವಿದ್ದರೂ ನಿಲ್ಲಿಸುತ್ತಿಲ್ಲ ಎಂಬ ದೂರುಗಳಿದ್ದು, ಈ ಬಗ್ಗೆ ಇಲಾಖೆಯ ಜಿಲ್ಲಾ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ, ಇಲ್ಲಿ ಬಸ್ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ವೈದ್ಯರು ರೋಗಿಗಳೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು, ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ್, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್, ಡಾ.ನಾಗೇಂದ್ರಮೂರ್ತಿ, ಡಾ.ನಾಗೇಶ್, ಡಾ.ಶಶಿರೇಖಾ, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಬಿ.ರವಿ, ಮಂಜು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು, ತೋಟೇಶ್, ಮುಖಂಡರಾದ ಮಲ್ಲು, ರಾಜಶೇಖರ್, ಲಿಂಗರಾಜು, ಲಿಂಗರಾಜಮೂರ್ತಿ, ಸಿಪಿಐ ಕೆ.ಶ್ರೀಕಾಂತ್ ಇದ್ದರು.