ಜಿಲ್ಲೆ

ನೆರವು ಕೇಳಲು ಹೋದ್ರೆ ನಾಯಿ ಛೂ ಬಿಟ್ಟಿದ್ರು..!

ಚಾಮರಾಜನಗರ : ನಟ ದರ್ಶನ್‌ಗೆ ಸೇರಿರುವ ತಿ.ನರಸೀಪುರದ ಫಾರ್ಮ್ ಹೌಸ್‌ನಲ್ಲಿ ಹತ್ತು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಪೆಟ್ಟು ಬಿದ್ದಿದ್ದಕ್ಕೆ ನ್ಯಾಯ ಕೇಳಲು ಹೋಗಿದ್ದವರ ಮೇಲೆ ನಟನ ಬೆಂಬಲಿಗರು ನಾಯಿ ಛೂ ಬಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

ತಾಲೂಕಿನ ನಿಜಲಿಂಗನಪುರ ಗ್ರಾಮದ ಮಹೇಶ್(45) ಪೆಟ್ಟು ತಿಂದು ಹಾಸಿಗೆ ಹಿಡಿದಿದ್ದಾರೆ. ಈ ಘಟನೆ ಕುರಿತು ತಾವರೆಕಟ್ಟೆ ಮಹೇಶ್ ವಿಜಯವಾಣಿಯೊಂದಿಗೆ ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆ ನಟ ದರ್ಶನ್ ಅವರ ಫಾರ್ಮ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ದನಕ್ಕೆ ಲಾಳ ಹೊಡೆಯುವಾಗ ತಲೆ ಭಾಗಕ್ಕೆ ಪೆಟ್ಟಾಗಿತ್ತು. ಈ ಸಂದರ್ಭದಲ್ಲಿ ದರ್ಶನ್ ಕಡೆಯವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟಿದ್ದಾರೆ. ಮರಳಿ ಮೂರು ದಿನಗಳ ಬಳಿಕ ಬರುವುದಾಗಿ ಹೇಳಿ ಹೋಗಿದ್ದರು. ಆದರೆ ಮತ್ತೆ ಬಾರದ ಹಿನ್ನೆಲೆಯಲ್ಲಿ ಾರ್ಮ್ ಹೌಸ್ ಬಳಿ ನ್ಯಾಯ ಕೇಳಲು ಹೋದಾಗ ಅವರ ಬೆಂಬಲಿಗರು ನಾಯಿ ಛೂ ಬಿಟ್ಟಿದ್ದರು ಎಂದು ದೂರಿದ್ದಾರೆ.
ಈ ಘಟನೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದನ್ನು ಗಮನಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದರ್ಶನ್ ಮೂಲಕ ಮಹೇಶ್‌ಗೆ 8 ಲಕ್ಷ ರೂ. ಪರಿಹಾರ ಕೊಡಿಸಿತ್ತು ಎಂದು ತಿಳಿದುಬಂದಿದೆ. ಈ ಹಣ ಮಹೇಶ್ ಚಿಕಿತ್ಸೆಗೆ ಸಾಕಾಗಲಿಲ್ಲ. ಇಂದಿಗೂ ಸಹ ಮಹೇಶ್ ಹಾಸಿಗೆ ಹಿಡಿದಿದ್ದಾರೆ ಎಂದು ಹೇಳಿದ್ದಾರೆ.

ಮಹೇಶ್ ಸ್ಥಿತಿ ಹೇಗಿದೆ?
10 ವರ್ಷಗಳ ಹಿಂದೆ ದರ್ಶನ್ ಾರ್ಮ್‌ಹೌಸ್‌ನಲ್ಲಿ ದನಕ್ಕೆ ಲಾಳ ಹೊಡೆಯುವಾಗ ಬಿದ್ದ ಪೆಟ್ಟು ಮಹೇಶ್‌ನನ್ನು ಇಂದಿಗೂ ಹಾಸಿಗೆ ಹಿಡಿಯುವಂತೆ ಮಾಡಿದೆ. ದರ್ಶನ್ ಅವರಿಂದ ಚಿಕಿತ್ಸೆಗೆ ಸಹಾಯ ಪಡೆದಿದ್ದರೂ ಪೂರ್ಣ ಗುಣಮುಖರಾಗಿಲ್ಲ. ಮನೆಗೆ ಮರಳಿದ ಕೆಲವೇ ದಿನಗಳಲ್ಲಿ ಎಡಗೈ, ಎಡಗಾಲಿನ ಸ್ವಾಧೀನ ಕಳೆದುಕೊಂಡಿತು. ಬಲಗಣ್ಣೂ ಸಹ ಕಾಣುತ್ತಿಲ್ಲ. ತಲೆಯ ಒಂದು ಭಾಗದಲ್ಲಿ ಆಪರೇಷನ್ ಆಗಿರುವುದರಿಂದ ಆ ಭಾಗ ಒಳಗೆ ಹೋಗಿದೆ. ಒಮ್ಮೆ ಮಾತನಾಡಿದ್ದನ್ನು ಮತ್ತೊಮ್ಮೆ ಮರೆಯುತ್ತಾರೆ. ಕೈ ಕಾಲು ಆಡಿಸಲು ಆಗುವುದಿಲ್ಲ. ಹಾಸಿಗೆ ಮೇಲೆ ಮಲಗಿದ್ದಾರೆ. ಮಹೇಶ್‌ಗೆ ಪತ್ನಿ, ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ದರ್ಶನ್ ಅವರಿಂದ ಇಂದಲ್ಲ ನಾಳೆ ಮತ್ತೆ ನೆರವು ಸಿಗಬಹುದೆಂದು ಇವರು ಕಾದು ಹತಾಶರಾಗಿದ್ದು, ಈಗ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿ ಬಂದಿರುವುದರಿಂದ ತಮಗೂ ಆಗಿರುವ ತೊಂದರೆಯನ್ನು ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ.