ಜಿಲ್ಲೆ

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ಜಿಲ್ಲೆಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಶಿಕ್ಷಣ ನೀಡುವ ಮಹತ್ತರ ಆಶಯದೊಂದಿಗೆ 7 ಕೋಟಿ ರೂ. ವೆಚ್ಚದಲ್ಲಿ ಟ್ಯಾಬ್ ಹಾಗೂ ಸ್ಮಾಟ್ ಟಿವಿಗಳನ್ನು ಶಾಲೆಗೆ ವಿತರಿಸಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ಹೊರವಲಯದ ಮಲ್ಲಯ್ಯನಪುರದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಸ್ಮಾರ್ಟ್ ಟಿವಿ ಮೂಲಕ ಸ್ಪಿಂಗ್ ಬೋರ್ಡ್‌ನಿಂದ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಗುರುವಾರ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಜಿಲ್ಲೆಯ ಒಟ್ಟು 60 ಸರ್ಕಾರಿ ಶಾಲೆಗಳನ್ನು ಕೌಶಲ ಮತ್ತು ಕಂಪ್ಯೂಟರ್ ಸಾಕ್ಷರತಾ ತರಬೇತಿಗೆ ಆಯ್ಕೆ ಮಾಡಿಕೊಂಡಿದ್ದು, ಇನ್‌ಫೋಸಿಸ್‌ನಿಂದ 1500 ಟ್ಯಾಬ್‌ಗಳು ಹಾಗೂ 120 ಸ್ಮಾರ್ಟ್ ಟಿವಿಗಳನ್ನು ನೀಡಿದೆ. ಚಾಮರಾಜನಗರ ತಾಲೂಕಿನ 20, ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ತಾಲೂಕಿನ ತಲಾ 10 ಸರ್ಕಾರಿ ಶಾಲೆಗಳನ್ನು ಡಿಜಿಟಲ್ ಶಿಕ್ಷಣದ ಬಲವರ್ಧನೆ ಗುರಿಯೊಂದಿಗೆ ಸ್ಪ್ರಿಂಗ್ ಬೋರ್ಡ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇನ್‌ಫೋಸಿಸ್, ರೋಟರಿ ಸಂಸ್ಥೆ, ವಿಷಯ ಪರಿಣತ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರನ್ನು ನಿಯೋಜಿಸಿದೆ. ಗಡಿ ಜಿಲ್ಲೆಯನ್ನು ಸ್ಪ್ರಿಂಗ್ ಬೋರ್ಡ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದ್ದು, ಈ ವಿಶಿಷ್ಟ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಜಿಲ್ಲೆಯ ಅಭಿವೃದ್ಧಿಗೆ ಮೂಲ ಸೌಕರ್ಯಗಳು ಬೇಕು. ಶೈಕ್ಷಣಿಕವಾಗಿ ಪ್ರಗತಿಯಾದರೆ ಜಿಲ್ಲೆಯು ಅಭಿವೃದ್ಧಿ ಹೊಂದಲಿದೆ. ವಿದ್ಯಾರ್ಥಿಗಳಾಗಿರುವ ನಿಮ್ಮಲ್ಲಿ ಆತ್ಮವಿಶ್ವಾಸ ಇದೆ. ಕಲಿಯುವ ಹಂಬಲ ನಿಮ್ಮಲ್ಲಿ ಇರಬೇಕು ಎಂದರು.

ಇನ್‌ಫೋಸಿಸ್, ರೋಟರಿ ಸಹಯೋಗದೊಂದಿಗೆ ನಗರದ ಕಾರಾಗೃಹದ ಬಂಧಿಗಳಿಗೆ ಅಲ್ಲಿಯೇ ಕಂಪ್ಯೂಟರ್ ತರಬೇತಿ ಪಡೆಯಲು ಈ ಹಿಂದೆಯೇ 10 ಕಂಪ್ಯೂಟರ್, ಪ್ರಿಂಟರ್‌ಗಳನ್ನು ಒದಗಿಸಲಾಗಿದೆ. ಇನ್‌ಫೋಸಿಸ್ ಸಹಕಾರದೊಂದಿಗೆ ತರಬೇತಿ ಸಿಬ್ಬಂದಿ ನಿಯೋಜಿಸಿ ಕಂಪ್ಯೂಟರ್ ಕೋರ್ಸ್ ಕಲಿಯುವ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇನ್ ಫೋಸಿಸ್ ಸಂಸ್ಥೆಯ ಪ್ರೋಗ್ರಾಂ ವ್ಯವಸ್ಥಾಪಕ ಬಿಳಿಗಿರಿರಂಗ, ನಿರ್ದೇಶಕ ರವೀಂದ್ರ, ಸಂಸ್ಥೆಯ ಡಾ.ಎಸ್.ಮೀನಾಕ್ಷಿ, ದೀಪ್ತಿ ಪದ್ಮನಾಭ್, ರಾಜೇಶ್ ರಾವ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಲಿಂಗರಾಜು ಹಾಗೂ ಇತರರು ಇದ್ದರು.