ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಕೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್ ಶೆಟ್ಟಿ ಬಣದ ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ನವೀನ್ ಕ್ವಾಲಿಟಿ ಅವರು ಮನವಿ ಸಲ್ಲಿಸಿ ಮಾತನಾಡಿ, ಡಿವಿಯೇಷನ್ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಲ್ಲ. ಜೋಡಿ ರಸ್ತೆಯಲ್ಲಿ ಕಂಬಗಳಿದ್ದರೂ ವಿದ್ಯುತ್ ಇಲ್ಲದಂತಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ನಗರಸಭೆ ವಾಣಿಜ್ಯ ಸಂಕೀರ್ಣ ಕಟ್ಟಡಗಳು ಇಂದಿಗೂ ಉದ್ಘಾಟನೆ ಕಾಣದೆ ನಿರುಪಯುಕ್ತವಾಗಿದೆ. ಚಾಮರಾಜನಗರ-ಗುಂಡ್ಲುಪೇಟೆ ಮಾರ್ಗದ ರಸ್ತೆಯನ್ನು ಅಗಲೀಕರಣ ಮಾಡಬೇಕು. ನಗರದಲ್ಲಿರುವ ಶೌಚಗೃಹಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ ಎಂದು ದೂರಿದರು.

ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಸರ್ಕಾರಿ ಶಾಲೆಗಳು ಶಿಕ್ಷಕರಿಲ್ಲದೆ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಮಹದೇಶ್ವರ ಬೆಟ್ಟದಲ್ಲಿ ಖಾಸಗಿ ಕಟ್ಟಡಗಳಲ್ಲಿ ಈ-ಸ್ವತ್ತು ಇಲ್ಲದೆ ಅಕ್ರಮವಾಗಿ ಲಾಡ್ಜಿಂಗ್ ವ್ಯವಹಾರ ನಡೆಸುತ್ತಿದ್ದಾರೆ. ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಶ್ರೀಚಾಮರಾಜೇಶ್ವರ ದೇವಸ್ಥಾನ ಮುಂಭಾಗದ ಉದ್ಯಾನವನಗಳನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದರು.

ಜಿಲ್ಲಾ ಸರ್ಕಾರಿ ಬಸ್ ನಿಲ್ದಾಣಕ್ಕೆ ಶ್ರಿಚಾಮರಾಜೇಂದ್ರ ಒಡೆಯರ್ ಹೆಸರನ್ನು ನಾಮಕರಣ ಮಾಡಬೇಕು. ಜಿಲ್ಲೆಯಲ್ಲಿ ಕಲಾಸೇವೆ ಮಾಡಿರುವ ಮಹನೀಯರ ಪ್ರತಿಮೆಗಳನ್ನು ನಗರದ ವೃತ್ತಗಳಲ್ಲಿ ಅಳವಡಿಸಬೇಕು. ನಗರದ ಎಲ್ಲ ವೃತ್ತಗಳು ಕಿರಿದಾಗಿದ್ದು, ಅದನ್ನು ಅಗಲೀಕರಣ ಮಾಡಬೇಕು. ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ವೇದಿಕೆಯ ಜಿಲ್ಲಾ ಗೌರವ ಅಧ್ಯಕ್ಷ ಕೃಷ್ಣನಾಯಕ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ತಾಲೂಕು ಪ್ರಧಾನಿ ಕಾರ್ಯದರ್ಶಿ ಅರ್ಜುನ್, ಉಪಾಧ್ಯಕ್ಷ ಅವಿನಾಶ್, ನಗರ ಅಧ್ಯಕ್ಷ ಮಹೇಂದ್ರ, ಕಾರ್ಯದರ್ಶಿ ಕಿಶೋರ್, ಮುಖಂಡ ಬಲವೀರ್ ಸಿಂಗ್ ಇದ್ದರು.