ಚಾಮರಾಜನಗರ :ನಗರದ 10 ಮತ್ತು 26 ನೇ ವಾರ್ಡ್‌ಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ನಗರಸಭೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನಿವಾಸಿಗಳಿಂದ ಸಮಸ್ಯೆಗಳನ್ನು ಆಲಿಸಿದರು.
ನಗರದ 10ನೇ ವಾರ್ಡ್ ಯುವ ಮುಖಂಡ ಎಸ್.ಭಾನುಪ್ರಕಾಶ್ ನೇತೃತ್ವದಲ್ಲಿ ವಾರ್ಡ್ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಗುರುವಾರ ಬೆಳಗ್ಗೆ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ 26ನೇ ವಾರ್ಡ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನಕ್ಕೆ ಮೊದಲ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ಬಡಾವಣೆಯ ನಿವಾಸಿಗಳು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ವಾರ್ಡ್‌ನಲ್ಲಿ ಸರಿಯಾದ ಸಮಯಕ್ಕೆ ನೀರು ಬರುತ್ತಿಲ್ಲ. ನಿತ್ಯವೂ ನೀರಿನ ಸಮಸ್ಯೆಯಿಂದಾಗಿ ಕೆಲಸಕ್ಕೆ ಹೋಗುವವರಿಗೆ, ಮಕ್ಕಳನ್ನು ಶಾಲೆಗೆ ಕಳುಹಿಸುವವರಿಗೆ ತುಂಬಾ ಸಮಸ್ಯೆಯುಂಟಾಗಿದೆ. ಬೆಳಗ್ಗೆ ಸಮಯದಲ್ಲಿ ನೀರು ಬಿಡಬೇಕು. ವಾಟರ್‌ಮನ್ ಸರಿಯಾಗಿ ಬೋರ್‌ವೆಲ್‌ನಿಂದ ನೀರು ಬಿಡುತ್ತಿಲ್ಲ. ನೀರು ಬಿಡು ಎಂದರೆ ಅಸಡ್ಡೆಯಾಗಿ ವರ್ತಿಸುತ್ತಾರೆ ಎಂದು ದೂರಿದರು.
ಶುದ್ಧ ಕುಡಿಯುವ ನೀರು ಘಟಕದಲ್ಲೂ ಸರಿಯಾಗಿ ನೀರು ಸಿಗುತ್ತಿಲ್ಲ. ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ನಿತ್ಯವೂ ಕಸ ಸಂಗ್ರವ ಮಾಡಲು ಬರುವುದಿಲ್ಲ. ಇದರಿಂದಾಗಿ ರಸ್ತೆಯಲ್ಲಿ ಕಸಬಿದ್ದು ಗಬ್ಬು ನಾರುತ್ತಿದೆ. ಬಡಾವಣೆಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾರ್ಡ್ ಮೂಲಸೌಕರ್ಯದಿಂದ ವಂಚಿತವಾಗಿದೆ ಎಂದು ನಿವಾಸಿಗಳು ಆರೋಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸ್ಥಳದಲ್ಲಿದ್ದ ಪೌರಾಯುಕ್ತ ರಾಮದಾಸ್ ಹಾಗೂ ನಗರಸಭೆಯ ಇತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ನಗರದ 10 ಮತ್ತು 26 ನೇ ವಾರ್ಡ್‌ಗಳ ನಿವಾಸಿಗಳಿಂದ ನಿರಂತರ ದೂರು ಬಂದ ಹಿನ್ನೆಲೆಯಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಿದಾಗ ಹಲವು ಸಮಸ್ಯೆಗಳು ಕೇಳಿಬಂದಿತು. ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಬೆಳಗ್ಗೆ 6 ರಿಂದ 9-30 ವರೆಗೆ ಕಡ್ಡಾಯವಾಗಿ ನಿತ್ಯವೂ ಮನೆ ಕಸ ಸಂಗ್ರಹಣೆ ಮಾಡಬೇಕು. ಆರೋಗ್ಯ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೆ ಸ್ಥಳದಲ್ಲಿರಬೇಕು. ಚರಂಡಿಗಳಲ್ಲಿ ಹೂಳು ತೆಗೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ರಮ ಕೈಗೊಳ್ಳುವ ಎಚ್ಚರಿಕೆ
ಕಬಿನಿ ಜಲಾಶಯ ಹಾಗೂ ಬೋರ್‌ವೆಲ್ನಿಂದ ನೀರು ಕೊಡಲಾಗುತ್ತದೆ. ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 290 ಬೋರ್‌ವೆಲ್ ಇದ್ದು, ನಿರಂತರವಾಗಿ ನೀರು ಬರುತ್ತಿಲ್ಲ ಎಂಬ ಆರೋಪಗಳು ಕೇಳಿಬರಬಾರದು. ವಾಟರ್‌ಮನ್‌ಗಳ ಬಗ್ಗೆ ತುಂಬಾ ದೂರು ಬಂದಿದೆ. ಅವರನ್ನು ಬದಲಾವಣೆ ಮಾಡುವಂತೆ ನಿರ್ದೇಶನ ನೀಡಲಾಗಿದೆ. ರಸ್ತೆ ಸಮಸ್ಯೆಗಳನ್ನು ಆದಷ್ಟು ಬೇಗ ಸರಿ ಮಾಡಬೇಕು. 15 ದಿನಗಳೊಳಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು, ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಎಚ್ಚರಿಕೆ ನೀಡಿದರು. ನಗರಸಭಾ ಸದಸ್ಯ ಮನೋಜ್‌ಪಟೇಲ್, ನಗರಸಭಾ ಅಧಿಕಾರಿಗಳು ಹಾಗೂ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.