ಜಿಲ್ಲೆ

ಸುವರ್ಣ ಸಂಭ್ರಮದಿಂದ ಪ್ರತಿಭೆ ಅನಾವರಣ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ ಹಾಗೂ ವಿವಿಧ ಕೌಶಲಗಳ ಅನಾವರಣಕ್ಕೆ ಸುವರ್ಣ ಸಂಭ್ರಮ ಉತ್ತಮ ವೇದಿಕೆಯಾಗಿದೆ ಎಂದು ಮಾಹಿತಿ ಮತ್ತು ಗ್ರಂಥಾಲಯ ವಿಭಾಗದ ಉಪನ್ಯಾಸಕ ಡಾ.ಮಹದೇವಮೂರ್ತಿ ಹೇಳಿದರು.
ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದ ಆವರಣದಲ್ಲಿ ಸುವರ್ಣ ಸಂಭ್ರಮ -2024ರ ಅಂಗವಾಗಿ ಬುಧವಾರ ಆಯೋಜಿಸಿದ್ದ ಸುವರ್ಣ ಸಂತೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಭಾರತೀಯ ವ್ಯಾಪಾರ ಪರಂಪರೆಯಲ್ಲಿ ಸಂತೆ ತನ್ನದೇ ಆದ ಹಿನ್ನೆಲೆಯನ್ನು ಹೊಂದಿದೆ. ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲಗಳನ್ನು ಬೆಳೆಸುವ ಮತ್ತು ವ್ಯಾಪಾರ-ವಹಿವಾಟುಗಳಲ್ಲಿ ಗ್ರಾಹಕರಿಗೆ ಮೋಸ, ವಂಚನೆಯಂತಹ ತೊಂದರೆಗಳ ಬಗೆಗೆ ಜಾಗೃತಿ ಉಂಟುಮಾಡುವ ಉದ್ದೇಶದಿಂದ ಸುವರ್ಣ ಸಂತೆಯಂತಹ ಸ್ಪರ್ಧೆಗಳು ಮುಖ್ಯವಾಗುತ್ತವೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಬಸವಣ್ಣ ಎಸ್.ಮೂಕಹಳ್ಳಿ ಮಾತನಾಡಿ, ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಗೆಯ ಭಾಗವಾಗಿ ಒಂದು ವಾರದವರೆಗೆ ಸುವರ್ಣ ಸಂಭ್ರಮ ಹೆಸರಿನ ಸಾಪ್ತಾಹಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವಾರದಲ್ಲಿ ಭಾವಗೀತೆ, ಚಲನಚಿತ್ರ ಗೀತೆ, ನೃತ್ಯ, ನಾಟಕ, ರಸಪ್ರಶ್ನೆ, ಸಂತೆಯಂತಹ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಅನಾವರಣಗೊಳಿಸಲು ಸುವರ್ಣ ಸಂಭ್ರಮ ಉತ್ತಮ ವೇದಿಕೆಯನ್ನು ಕಲ್ಪಿಸಿದೆ. ವಿದ್ಯಾರ್ಥಿಗಳು ಈ ಚಟುವಟಿಕೆಗಳಲ್ಲಿ ಕ್ರೀಯಾಶೀಲವಾಗಿ ಭಾಗವಹಿಸುತ್ತಿದ್ದು, ಹೊಸ ಹುರುಪನ್ನು ತುಂಬಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗಕ್ಕೆ ಒಗ್ಗಿಕೊಳ್ಳುವ ಕೌಶಲಗಳನ್ನು ಕಲಿಸುವ ಉದ್ದೇಶ ಇದರಲ್ಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿವಿಧ ತಂಡಗಳಾಗಿ ಮಾಡಿಕೊಂಡು ಹಲವು ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿದ್ದರು. ತಾವು ತಯಾರಿಸಿದ ಆಹಾರ ಪದಾರ್ಥಗಳ ಮಾರಾಟವನ್ನು ಮಾಡಿ ಗಮನಸೆಳೆದರು. ಈ ವೇಳೆ ಅರ್ಥಶಾಸ್ತ್ರ ಉಪನ್ಯಾಸಕಿ ದೀಪಾ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಪೂಜಾ, ಉಪನ್ಯಾಸಕ ಚೇತನ್ ಹಾಗೂ ಇತರರು ಭಾಗವಹಿಸಿದ್ದರು.