ಜಿಲ್ಲೆ

ಸಾರ್ವಜನಿಕರಿಂದ ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ; ಪಟ್ಟಣದಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ಸಾರ್ವಜನಿಕರ ಕುಂದುಕೊರತೆ ಆಲಿಸಿ ಪರಿಹಾರ ನೀಡಿದರು.

ಪಟ್ಟಣದ ಪ್ರವಾಸ ಮಂದಿರದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್‌ಕುಮಾರ್ ಕಂದಾಯ, ಭೂಮಾಪನಾ, ತೋಟಗಾರಿಕೆ, ಕೃಷಿ, ಪುರಸಭೆ ಮುಂತಾದ ಇಲಾಖೆಗಳ ಬಗ್ಗೆ ಸಾರ್ವಜನಿಕರು ನೀಡಿದ ದೂರು ಸ್ವೀಕರಿಸಿದರು. ಬಳಿಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಬಂದಿರುವ ದೂರು ಅರ್ಜಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.

ಪಟ್ಟಣದ ಹೊರವಲಯದ ಬಳಿ ಇರುವ ಪುರಸಭಾ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಮತ್ತು ಮರುಬಳಕೆ ಕೆಲಸ ಯಾವ ಹಂತದಲ್ಲಿದೆ ಎಂಬುದರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ವಿಲೇವಾರಿ ಘಟಕದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಕಸ ವಿಲೇವಾರಿ ಮಾಡಿರುವುದನ್ನು ಗಮನಿಸಿ ಕಸವನ್ನು ಶೀಘ್ರದಲ್ಲೇ ಸ್ಥಳಾಂತರಿಸುವಂತೆ ನೈರ್ಮಲ್ಯ ನಿರ್ವಹಣೆ ಮುಖ್ಯಾಧಿಕಾರಿ ವಸಂತಕುಮಾರಿ ಅವರಿಗೆ ಸೂಚನೆ ನೀಡಿದರು. ಲೋಕಾಯುಕ್ತ ಅಧಿಕಾರಿಗಳ ಸೂಚನೆ ಮೇರೆಗೆ ಪುರಸಭಾ ಅಧಿಕಾರಿಗಳು ಕಸವನ್ನು ಸ್ಥಳಾಂತರಿಸುವ ಕೆಲಸಕ್ಕೆ ಮುಂದಾದರು. ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ಇತರರು ಇದ್ದರು.