ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲು ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಹೇಳಿದರು.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ 1,88,706 ಮತಗಳ ಅಂತರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಅವರ ಐತಿಹಾಸಿಕ ಗೆಲುವಿನ ಮೂಲಕ ಚಾಮರಾಜನಗರ ಜಿಲ್ಲೆ ಮತ್ತೆ ಕಾಂಗ್ರೆಸ್ ಭದ್ರಕೋಟೆ ಎಂಬುವುದನ್ನು ಸಾಬೀತುಪಡಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದಕ್ಷ ಅಡಳಿತ ಪರಿಣಾಮದಿಂದ ಕಾಂಗ್ರೆಸ್‌ಗೆ ಹೆಚ್ಚಿನ ಮತ ಬರಲು ಸಾಧ್ಯವಾಯಿತು. ಜನರು ಅಧಿಕ ಮತ ನೀಡುವ ಮೂಲಕ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಕ್ಷೇತ್ರ ಶಾಸಕರು, ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು, ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರ ಅಭಿವೃದ್ಧಿ ಕೆಲಸಗಳು ಕೂಡ ಪಕ್ಷದ ಗೆಲುವಿಗೆ ಕಾರಣವಾಗಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಎಸ್.ಟಿ. ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಮಹದೇವು, ಕನಿಷ್ಟ ವೇತನ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್, ತಾ.ಪಂ.ಮಾಜಿ ಸದಸ್ಯ ಪುಟ್ಟಸ್ವಾಮಿ ಹಾಜರಿದ್ದರು.