ಜಿಲ್ಲೆ

ನಗರದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಎ.ಎಸ್.ಮಣಿಕಂಠ

ಚಾಮರಾಜನಗರ: ದೇಶದ ಪ್ರಧಾನಿಯಾಗಿ 3ನೇ ಬಾರಿಗೆ ನರೇಂದ್ರಮೋದಿ ಹಾಗೂ ಕೇಂದ್ರ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಸೋಮವಾರ ಜೆಡಿಎಸ್ ಮುಖಂಡರಾದ ಆಲೂರುಮಲ್ಲು, ಬಿ.ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ ಜಮಾಯಿಸಿದ ಮುಖಂಡರು, ಕಾರ್ಯಕರ್ತರು ಕುಮಾರಸ್ವಾಮಿ, ನರೇಂದ್ರಮೋದಿ ಪರ ಜೈಕಾರ ಕೂಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಆಲೂರುಮಲ್ಲು ಮಾತನಾಡಿ, ನಮ್ಮ ಪಕ್ಷದ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿ ಹಾಗೂ ನರೇಂದ್ರಮೋದಿ ಅವರು ದೇಶದ 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದ ತುಂಬಾ ಸಂತಸವಾಗಿದೆ. ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದರು ಕೂಡ ಹೆಚ್ಚಿನ ಮತಗಳ ಅಂತರದಲ್ಲಿ ಜಯಭೇರಿಬಾರಿಸಿದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಗಿದೆ ಎಂದರು.

ಮುಖಂಡ ಬಿ.ಪುಟ್ಟಸ್ವಾಮಿ ಮಾತನಾಡಿ, ಇಂಡಿಯಾ ಮೈತ್ರಿಕೂಟ ಎಲ್ಲ ಕುತಂತ್ರ ನಡೆಸಿದರು ಕೂಡ ಎನ್‌ಡಿಎ ಮೈತ್ರಿಕೂಟ ಬಹಳ ಯಶಸ್ವಿಯಾಗಿ ದೇಶಗದ್ದುಗೆ ಹಿಡಿದಿದ್ದು, ದೇಶದ ಸಸತ 3ನೇ ಬಾರಿಗೆ ನರೇಂದ್ರಮೋದಿಯವರು, ಪ್ರಥಮ ಬಾರಿಗೆ ಕೇಂದ್ರ ಸಚಿವರಾಗಿ ಕುಮಾರಣ್ಣ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕುಮಾರಣ್ಣ, ನರೇಂದ್ರಮೋದಿಯವರು ದೇಶದ ಜನತೆಗೆ ಅನುಕೂಲ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂತೇಮರಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಶಂಕರಪ್ಪ, ಯಳಂದೂರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆಸ್ತೂರು ಆನಂದ್‌ಉಪ್ಪಾರ್, ಹೊಮ್ಮದ ಮಹದೇವಸ್ವಾಮಿ, ರೇಚಂಬಳ್ಳಿ ಕುಮಾರ್,ಪಣ್ಯದಹುಂಡಿ ರಾಜು, ನಾಗರಾಜು, ಕೂಡ್ಲೂರು ಮುತ್ತುರಾಜು, ಪುಪ್ಷಲತಾ, ತೇಜಶ್ವನಿ ಇತರರು ಭಾಗವಹಿಸಿದ್ದರು.