ಜಿಲ್ಲೆ

ತೋಟಗಾರಿಕೆ ಇಲಾಖೆ ಮುಂಭಾಗ ರೈತರ ಧರಣಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಬಿರುಗಾಳಿ-ಮಳೆಯಿಂದ ನೊಂದಿರುವ ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ತೋಟಗಾರಿಕೆ ಇಲಾಖೆ ಕಚೇರಿ ಮುತ್ತಿಗೆ ಹಾಕಿ ಧರಣಿ ನಡೆಸಲಾಯಿತು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಹೊರಟು ಸತ್ತಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕ ಸಹಾಯಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬಾಳೆ ಬೆಳೆಯು ನಾಶವಾಗಿದೆ. ಅಧಿಕಾರಿಗಳು ವೈಜ್ಞಾನಿಕವಾಗಿ ಬೆಳೆ ನಷ್ಟವನ್ನು ಅಂದಾಜಿಸದೆ ಕೇವಲ ಕಾಟಾಚಾರಕ್ಕೆ ಅಂದಾಜು ಮಾಡಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೋಟಗಾರಿಕೆ ಉಪ ನಿರ್ದೇಶಕರು 1102 ಹೆಕ್ಟೇರ್ ಪ್ರದೇಶ ಮಾತ್ರ ಬೆಳೆ ನಷ್ಟವಾಗಿತ್ತು. ಇದರಲ್ಲಿ 1096 ಹೆಕ್ಟರ್ ಪ್ರದೇಶಕ್ಕೆ, ಪ್ರತಿ ಹೆಕ್ಟರ್‌ಗೆ 17 ಸಾವಿರದಂತೆ 186 ಲಕ್ಷ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಒಂದು ಎಕರೆ ಬಾಳೆ ಬೆಳೆಯಲು ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚಿಗೆ ಖರ್ಚಾಗುತ್ತದೆ. ಆದರೆ ಅಧಿಕಾರಿಗಳು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾನದಂಡ ಎಂದು ರೈತರ ಮೇಲೆ ಚಪ್ಪಡಿ ಎಳೆಯುತ್ತಿದ್ದಾರೆ. ಇದು ವಿಶೇಷ ಪ್ಯಾಕೇಜ್ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಬಾಳೆ ಬೆಳೆಗಾರರಿಗೆ ತೀವ್ರಘಾತ ಉಂಟಾಗಿದೆ. ತಕ್ಷಣ ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳು ಕ್ರಮವಹಿಸಿ ವೈಜ್ಞಾನಿಕ ರೀತಿಯಲ್ಲಿ ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೊಡಿಸಲು ಹಾಗೂ ಪರಿಹಾರ ಕೊಡಿಸಲು ಕ್ರಮವಹಿಸಬೇಕು. ಇಲ್ಲದಿದ್ದರೆ ಚುನಾಯಿತ ಪ್ರತಿನಿಧಿಗಳಿಗೆ ಹೋರಾಟದ ಮೂಲಕ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರು ಹಾಲಿನ ನಾಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಮೈಸೂರು ಜಿಲ್ಲಾಧ್ಯಕ್ಷ ಹಾಡ್ಯ ರವಿ, ಜನ್ನೂರು ಶಾಂತರಾಜು, ಉಡಿಗಾಲ ಮಹದೇವಸ್ವಾಮಿ, ಬಸವರಾಜಪ್ಪ, ಪ್ರವೀಣ್, ಮಹೇಂದ್ರ, ಸತೀಶ್, ಮೂಡ್ನಕೂಡು ಸೋಮೇಶ್, ಅರಳಿ ಕಟ್ಟೆ ಪ್ರಭುಸ್ವಾಮಿ, ಸಿದ್ದಲಿಂಗಪ್ಪ, ಸಿದ್ದಪ್ಪ, ಗುರುವಿನಪುರ ಮೋಹನ್ ಹಾಗೂ ಇತರರು ಭಾಗವಹಿಸಿದ್ದರು.