ಚಾಮರಾಜನಗರ: ಒಂದು ವರ್ಷದಿಂದ ರೇಷನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವ 3 ಸಾವಿರಕ್ಕಿಂತಲೂ ಹೆಚ್ಚು ಜನರು ಪಡಿತರ ಚೀಟಿಗಾಗಿ ಕಾಯುತ್ತಿದ್ದು, ಚುನಾವಣಾ ನೀತಿ ಸಂಹಿತೆ ಹಾಗೂ ಇನ್ನಿತರೆ ಕಾರಣಗಳಿಂದ ಹೊಸ ರೇಷನ್‌ಕಾರ್ಡ್ ಅರ್ಜಿದಾರರಿಗೆ ದೊರೆಯದೇ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ ಚಾಮರಾಜನಗರ ತಾಲೂಕಿನಲ್ಲಿ 3218 , ಗುಂಡ್ಲುಪೇಟೆ ತಾಲೂಕಿನಲ್ಲಿ 1969, ಕೊಳ್ಳೇಗಾಲ 1944, ಯಳಂದೂರು 993 ಹಾಗೂ ಹನೂರು ತಾಲೂಕಿನಲ್ಲಿ 3467, ಒಟ್ಟಾರೆ 11591 ಜನರು ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಚಾಮರಾಜನಗರ ತಾಲೂಕಿನಲ್ಲಿ 2370 ಪಡಿತರ ಕಾರ್ಡ್, ಗುಂಡ್ಲುಪೇಟೆ 942, ಕೊಳ್ಳೇಗಾಲ 1286, ಯಳಂದೂರು 618 ಹಾಗೂ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ 1086, ಒಟ್ಟಾರೆ 7472 ಅರ್ಜಿದಾರರಿಗೆ ಪಡಿತರ ಚೀಟಿ ವಿತರಣೆ ಮಾಡಲಾಗಿದೆ. 3255 ಅರ್ಜಿದಾರರಿಗೆ ಈವರೆಗೂ ಪಡಿತರ ಚೀಟಿ ವಿತರಣೆ ಮಾಡಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.
ಹೊಸ ಪಡಿತರ ಚೀಟಿ ವಿತರಣೆ ಮಾಡುವ ಬಗ್ಗೆ ಇಲಾಖೆಯಿಂದ ಯಾವುದೇ ರೀತಿಯ ಮಾಹಿತಿ ಇಲ್ಲದೇ, ಹೊಸ ಅರ್ಜಿದಾರರು ಪಡಿತರ ಚೀಟಿ ಪಡೆಯಲು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಾಗೂ ಇನ್ನಿತರೆ ಕಾರಣಗಳಿಂದ ಹೊಸ ಪಡಿತರ ಚೀಟಿ ವಿತರಣೆ ಮಾಡುವುದರಲ್ಲಿ ವಿಳಂಬವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಚುನಾವಣೆ ಮುಗಿದ ಬಳಿಕವೂ ಆನ್‌ಲೈನ್ ಮೂಲಕ ಪಡಿತರ ಚೀಟಿ ಪಡೆಯಲು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಜನರು ಪರದಾಡುವಂತಾಗಿದೆ. ಆಸ್ಪತ್ರೆ, ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಲು, ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಪಡಿತರ ಚೀಟಿ ಇಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಹೊಸಕಾರ್ಡ್ ನಿರೀಕ್ಷೆಯಲ್ಲಿ ಜನರು:
ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ಹೊಸಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದ್ದ 3255 ಅರ್ಜಿದಾರರು ಹೊಸ ಕಾರ್ಡ್ ನಿರೀಕ್ಷೆಯಲ್ಲೇ ಕಾಲದೂಡುವಂತಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 405, ಗುಂಡ್ಲುಪೇಟೆ 868, ಕೊಳ್ಳೇಗಾಲ 567, ಯಳಂದೂರು 329 ಹಾಗೂ ಹನೂರು ತಾಲೂಕಿನಲ್ಲಿ 1086 ಕಾರ್ಡ್‌ಗಳನ್ನು ಇಲಾಖೆ ವತಿಯಿಂದ ವಿತರಣೆ ಮಾಡಬೇಕಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಅರ್ಜಿದಾರರು ಅಲ್ಲದೇ ಹೊಸದಾಗಿ ಪಡಿತರ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಬರುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದ್ದು, ಆನ್‌ಲೈನ್ ಕೇಂದ್ರಗಳಿಗೆ ನಿತ್ಯವೂ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಪಡಿತರ ಚೀಟಿಗೆ ಕಾಯುತ್ತಿರುವ ಜನರ ಸಮಸ್ಯೆಗಳನ್ನು ಸರ್ಕಾರ ಅರಿತು ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಬೇಕು. ಪ್ರಸ್ತುತ ಹೊಸದಾಗಿ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವವರಿಗೂ ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾರ್ಡ್ ಇಲ್ಲದೇ ಹಲವು ಸಮಸ್ಯೆ:
ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರೆಂಟಿ ಯೋಜನೆಗಳಾದ ಗೃಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಗಳ ಸೌಲಭ್ಯ ಹಾಗೂ ಕೇಂದ್ರ ಸರ್ಕಾರದ ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳಲು ಪಡಿತರ ಚೀಟಿ ಕಡ್ಡಾಯವಾಗಿ ಬೇಕಾಗಿದೆ. ಹಲವಾರು ಬಡ ಮತ್ತು ಮಧ್ಯಮ ವರ್ಗದ ಜನರು ಪಡಿತರ ಚೀಟಿ ಇಲ್ಲದೇ ಆಸ್ಪತ್ರೆಗಳಲ್ಲಿ ದೊರೆಯುವ ಉಚಿತ ಚಿಕಿತ್ಸೆಯಿಂದ ವಂಚಿತರಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಕೆಲವು ಜನರು ಬ್ಯಾಂಕ್‌ಗಳಲ್ಲಿ ಸಾಲಸೌಲಭ್ಯಗಳನ್ನು ಪಡೆಯಲು ಹಾಗೂ ವಯಸ್ಸಾದವರಿಗೇ ಪಡಿತರ ಚೀಟಿ ಲಭ್ಯವಿಲ್ಲದೇ ಹಲವು ಸೌಭ್ಯಗಳನ್ನು ಪಡೆದುಕೊಳ್ಳಲು ಸಮಸ್ಯೆಯಾಗುತ್ತಿದೆ. ಅರ್ಜಿ ಸಲ್ಲಿಸುವ ಮತ್ತು ಇನ್ನಿತರೆ ಮಾಹಿತಿ ಪಡೆದುಕೊಳ್ಳುವ ಆನ್‌ಲೈನ್ ಕೇಂದ್ರಗಳಲ್ಲಿ ಇಲಾಖೆಯ ೆರ್ಟಲ್‌ನಲ್ಲಿ ಇಂಟರ್ನೆಟ್ ಸಮಸ್ಯೆ ಉಂಟಾಗುತ್ತಿದ್ದು, ಕಾರ್ಡ್ ತಿದ್ದುಪಡಿ ಮಾಡಲು, ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಜನರು ನಿತ್ಯವೂ ಕಂಪ್ಯೂಟರ್ ಕೇಂದ್ರಗಳಿಗೆ ನಿತ್ಯವೂ ಅಳೆದಾಡುವಂತಾಗಿದೆ.
ಕಾರ್ಡ್‌ಗಳಿಗೆ ಜಾತಿಪ್ರಮಾಣಪತ್ರ ಲಿಂಕ್:
ಜಿಲ್ಲೆಯಲ್ಲಿರುವ ಎಸ್ಟಿ/ಎಸ್ಟಿ ಸಮುದಾಯಗಳ ಕಾರ್ಡ್‌ದಾರರ ಜಾತಿಪ್ರಮಾಣ ಪತ್ರವನ್ನು ರೇಷನ್‌ಕಾರ್ಡ್‌ಗೆ ಲಿಂಕ್‌ಮಾಡಲಾಗುತ್ತಿದೆ. ಎಲ್ಲಾ ಇಲಾಖೆಗಳಲ್ಲೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಬುಡಕಟ್ಟು ಸಮುದಾಯಗಳ ವಿಶೇಷ ಅಭಿವೃದ್ಧಿ ಯೋನೆಯು ಇರುವಂತೆರಯೇ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ಎಷ್ಟು ಎಸ್ಸಿ/ಎಸ್ಟಿ ಜನರು ಕಾರ್ಡ್ ಹೊಂದಿದ್ದಾರೆ ಎಂಬ ನಿಖರಮಾಹಿತಿಯನ್ನು ಕಳೆಹಾಕುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮೂಲಕ ಎಸ್ಸಿ/ಎಸ್ಟಿ ಜನರ ರೇಷನ್ ಕಾರ್ಡ್‌ಗಳಿಗೆ ಜಾತಿ ಪ್ರಮಾಣ ಪತ್ರವನ್ನು ಲಿಂಕ್ ಮಾಡಲಾಗುತ್ತಿದೆ.
ಕಳೆದ ವರ್ಷದಲ್ಲಿ ಹೊಸ ಪಡಿತರ ಚೀಟಿಗಳಿಗಾಗಿ ಅರ್ಜಿಸಲ್ಲಿಸಿದ್ದ ಅರ್ಜಿದಾರರಲ್ಲಿ ಶೇ.70 ರಷ್ಟು ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಉಳಿದಂತೆ ಕೆಲವು ಕಾರ್ಡ್‌ಗಳು ಪರಿಶೀಲನೆಗೆ ಬಾಕಿ ಇದೆ. ಕೆಲವು ಕಾರ್ಡ್‌ಗಳನ್ನು ಪರಿಶೀಲನೆ ಮಾಡಲಾಗಿದೆ. ಸರ್ಕಾರದಿಂದ ಅನುಮತಿ ನೀಡದ ಬಳಿಕ ವಿತರಣೆ ಮಾಡಲಾಗುತ್ತದೆ.-ಸವಿತಾ, ಉಪನಿರ್ದೇಶಕಿ, ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಚಾಮರಾಜನಗರ