ಚಾಮರಾಜನಗರ: ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ವಿ.ಸೋಮಣ್ಣ ಕೇಂದ್ರ ಸಚಿವರಾಗುವ ಮೂಲಕ ಚಾಮರಾಜನಗರ ವಿಧಾನಸಭೆ ಚುನಾವಣೆಯ ಸೋಲಿಗೆ ಕಾರಣವಾಗಿದ್ದ ಸ್ವಪಕ್ಷೀಯರಿಗೆ ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ.
ತುಮಕೂರು ಎಂಪಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ವಿರುದ್ಧ ಬಿಜೆಪಿ-ಜೆಎಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆದ್ದಾಗಿದೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಕರ್ನಾಟಕದ ನಾಲ್ವರಲ್ಲಿ ವಿ.ಸೋಮಣ್ಣ ಕೂಡ ಒಬ್ಬರಾಗಿದ್ದಾರೆ. ಇದು ತುಮಕೂರು ಕ್ಷೇತ್ರಕ್ಕೆ ಕೇಂದ್ರ ಸಚಿವಗಿರಿ ಒಲಿದುಬಂದ ಹಿರಿಮೆಯಾದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಪಕ್ಷೀಯರು ಒಳೇಟು ಕೊಟ್ಟು ಸೋಲಿಗೆ ಕಾರಣವಾಗಿದ್ದ ಚಾಮರಾಜನಗರ ಕ್ಷೇತ್ರಕ್ಕೆ ರಾಜಕೀಯ ಬೆಳವಣಿಗೆ ಮೂಲಕ ತಿರುಗೇಟು ಕೊಟ್ಟಂತಾಗಿದೆ.
ವರುಣ ಮತ್ತು ಚಾಮರಾಜನಗರ ಎರಡೂ ವಿಧಾನಸಭಾ ಕ್ಷೇತ್ರಗಳಿಂದ ವಿ.ಸೋಮಣ್ಣ ಸ್ಪರ್ಧೆ ಮಾಡಿದ್ದರು. ಒಂದೆಡೆ ಗುರು ಸಿದ್ದರಾಮಯ್ಯ, ಮತ್ತೊಂದೆಡೆ ಶಿಷ್ಯ ಸಿ.ಪುಟ್ಟರಂಗಶೆಟ್ಟಿ ಎದುರಾಳಿಯಾಗಿ ಕಣಕ್ಕಿಳಿದು ಸೋತರು. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವುದು ಸುಲಭವಾಗಿರಲಿಲ್ಲ. ಚುನಾವಣೆ ಅಖಾಡಕ್ಕಿಳಿದಾಗಿನಿಂದಲೂ ಸೋಲನ್ನೇ ಕಂಡಿರದ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಜಯ ಗಳಿಸುವುದು ಸಲೀಸಾಗಿರಲಿಲ್ಲ. ವಿ.ಸೋಮಣ್ಣಗೆ ಈ ನೇರಾನೇರ ಹೋರಾಟದಲ್ಲಿ ಸಿ.ಪುಟ್ಟರಂಗಶೆಟ್ಟಿ ಎದುರಾಳಿಯಾಗಿದ್ದರೆ, ಸ್ವಪಕ್ಷದಲ್ಲೇ ಕೆಲವರು ಒಳದಾಳಿ ಮಾಡಿದ್ದರು. ಈ ಸಿಟ್ಟು ವಿ.ಸೋಮಣ್ಣಗೆ ಬಲವಾಗಿ ಕಾಡಿತ್ತು.
ಸೋತ ಬಳಿಕ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ವಿ.ಸೋಮಣ್ಣ ಕೆಂಡಾಮಂಡಲರಾಗಿದ್ದರು. ತನ್ನ ವಿರುದ್ಧ ಚಟುವಟಿಕೆ ಮಾಡಿದವರ ಹೆಸರನ್ನು ಹೇಳದೆ ಅವರು ‘ಕ್ಷೇತ್ರಕ್ಕೆ ಬಂದರೆ ಹೊಡೆದು ಕಳುಹಿಸಿ’ ಎಂದಿದ್ದರು. ಒಳೇಟು ಕೊಟ್ಟಿದ್ದವರ ಕುರಿತು ನನ್ನ ಬಳಿ ದಾಖಲೆ ಇದೆ. ಪಕ್ಷದ ವರಿಷ್ಠರಿಗೆ ಸಾಕ್ಷ್ಯ ನೀಡುತ್ತೇನೆ ಎಂದಿದ್ದರು. ಅಂದು ಜಿಲ್ಲಾಧ್ಯಕ್ಷರಾಗಿದ್ದ ನಾರಾಯಣಪ್ರಸಾದ್‌ಗೆ ಪಕ್ಷ ವಿರೋಧಿ ಚಟವಟಿಕೆ ಮಾಡಿದವರನ್ನು ಉಚ್ಚಾಟನೆ ಮಾಡಿ ಎಂದು ಹೇಳಿದ್ದರು. ಹೀಗೆ ಆಕ್ರೋಶಗೊಂಡು ಹೋಗಿದ್ದವರು ಬಳಿಕ ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದು ಬಿಟ್ಟರೆ ರಾಜಕೀಯ ಉದ್ದೇಶಕ್ಕಾಗಿ ಸೋಮಣ್ಣ ಬಂದಿರಲಿಲ್ಲ.
ವಿಧಾನಸಭೆ ಚುನಾವಣೆ ಸೋಲು ಸೋಮಣ್ಣ ರಾಜಕೀಯ ಭವಿಷ್ಯನ್ನೇ ಮಂಕು ಮಾಡಿತ್ತು. ಒಂದಲ್ಲ, ಎರಡು ಕಡೆ ಸ್ಪರ್ಧೆ ಮಾಡಿ ಅನುಭವಿಸಿದ ಹಿನ್ನಡೆ ದೊಡ್ಡ ಹೊಡೆತ ಕೊಟ್ಟಿತ್ತು. ಒಳೇಟು ಕೊಟ್ಟಿದ್ದ ಸ್ವಪಕ್ಷೀಯರು ಇದರ ಖುಷಿಯನ್ನು ಅನುಭವಿಸುತ್ತಿದ್ದರು ಎನ್ನುವಾಗಲೇ, ಲೋಕಸಭೆ ಚುನಾವಣೆ ಬಂತು. ತುಮಕೂರಿನಿಂದ ಸ್ಪರ್ಧೆ ಮಾಡಿದ ವಿ.ಸೋಮಣ್ಣ ಗೆದ್ದು ಕೇಂದ್ರದ ಮಂತ್ರಿಯಾಗಿದ್ದಾರೆ. ಇದು ಚಾಮರಾಜನಗರದಲ್ಲಿ ಒಳೇಟು ಕೊಟ್ಟಿದ್ದವರಿಗೆ ಕೊಟ್ಟ ಉತ್ತರವಾಗಿದೆ.
ಬೆಂಬಲಿಗರಲ್ಲಿ ಹರ್ಷ
ಹಳೇ ಮೈಸೂರು ಭಾಗದಲ್ಲಿ ವಿ.ಸೋಮಣ್ಣ ಅವರ ಬೆಂಬಲಿಗರಿದ್ದಾರೆ. ಇವರೆಲ್ಲರೂ ಈಗ ಹರ್ಷದಲ್ಲಿದ್ದಾರೆ. ಮುಖ್ಯವಾಗಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅನುಯಾಯಿಗಳ ಸಂತಸ ಮುಗಿಲು ಮುಟ್ಟಿದೆ. ಇವರಲ್ಲಿ ಹಲವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತುಮಕೂರಿಗೆ ಭೇಟಿ ನೀಡಿದ್ದರು. ಚುನಾವಣಾ ಪ್ರಚಾರದಲ್ಲೂ ಪಾಲ್ಗೊಂಡು ಸೋಮಣ್ಣ ಗೆಲುವಿಗೆ ಹರಸಿದ್ದರು. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಾಗ ದೊಡ್ಡ ಬಳಗವೇ ಕೆಲಸ ಮಾಡಿದರೂ ಸೋಲುಂಟಾಗಿತ್ತು. ಪ್ರಾಮಾಣಿಕವಾಗಿ ಚುನಾವಣೆ ಕೆಲಸ ಮಾಡಿದವರು, ಸೋತ ಬಳಿಕವೂ ಜತೆಗೆ ಇದ್ದ ಮುಖಂಡರಷ್ಟೇ ಈಗ ಸೋಮಣ್ಣ ಅವರ ಹತ್ತಿರ ಸುಳಿಯುವುದಕ್ಕೆ ಸಾಧ್ಯವಾಗುತ್ತಿದೆ.
ಸೋಲೇ ಗೆಲುವಿನ ಮೆಟ್ಟಿಲಾಯ್ತು
ವಿ.ಸೋಮಣ್ಣ ಚಾಮರಾಜನಗರ ಮತ್ತು ವರುಣ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಧೈರ್ಯ ಮಾಡಿದರು. ಎಲ್ಲೂ ರಾಜಿಯಾಗದೆ ಎರಡೂ ಕಡೆ ಗಂಭೀರ ಪ್ರಯತ್ನ ಮಾಡಿದರು. ಎದುರಾದ ಸೋಲಿನಿಂದ ರಾಜಕೀಯ ಭವಿಷ್ಯದ ಮೇಲೆ ಮಂಕ ಕವಿದಿದ್ದರಿಂದ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಮತ್ತು ಕೇಂದ್ರ ಸಚಿವ ಸ್ಥಾನವನ್ನು ನೀಡಿದೆ ಎನ್ನಲಾಗುತ್ತಿದೆ.
ಇಲ್ಲಿ ಸೋಲು, ಅಲ್ಲಿ ಗೆಲುವು
ಚಾಮರಾಜನಗರ ವಿಧಾನಸಭಾ ಕ್ಷೇತ್ರಲ್ಲಿ ಸೋತು ಮತ ಎಣಿಕೆ ಕೇಂದ್ರಕ್ಕೂ ಬಾರದ ವಿ.ಸೋಮಣ್ಣ ತುಮಕೂರು ಲೋಕಸಭೆ ಚುನಾವಣೆಯಲ್ಲಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಚಾಮರಾಜನಗರದಲ್ಲಿ ಸಿ.ಪುಟ್ಟರಂಗಶೆಟ್ಟಿ 83,136 ಮತಗಳನ್ನು ಪಡೆದುಕೊಂಡರೆ, ವಿ.ಸೋಮಣ್ಣ 75,753 ಮತಗಳನ್ನು ಗಳಿಸಿ 7383 ಮತಗಳ ಹಿನ್ನಡೆ ಅನುಭವಿಸಿದ್ದರು. ಆದರೆ ತುಮಕೂರು ಲೋಕಸಭೆ ಚುನಾವಣೆಯಲ್ಲಿ 5,45,352 ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ವಿರುದ್ಧ ಬಿಜೆಪಿ-ಜೆಎಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ 7,20,946 ಮತಗಳನ್ನು ಪಡೆದು 1,75,594 ಮತಗಳ ಅಂತರದಿಂದ ಗೆದ್ದಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಲ್ಲಿದ್ದಕೊಂಡೇ ವಿ.ಸೋಮಣ್ಣ ಬೆನ್ನಿಗೆ ಅನೇಕರು ಚೂರಿ ಹಾಕಿದರು. ಈ ಕೆಲಸ ಮಾಡಿದವರು ಸೋಲಿನ ಬಳಿಕ ವಿಕೃತ ಆನಂದ ಅನುಭವಿಸಿದ್ದರು. ತುಮಕೂರಿನಲ್ಲಿ ಈ ಷಡ್ಯಂತ್ರ ನಡೆಯಲಿಲ್ಲ. ಪಕ್ಷದ ಮಹಾನಾಯಕರಾದ ನರೇಂದ್ರಮೋದಿ ಮತ್ತು ಅಮಿತ್ ಷಾ ಅವರು ಸೋಲುಂಡಿದ್ದ ಸೋಮಣ್ಣ ಅವರನ್ನು ದೆಹಲಿಗೆ ಕರೆಸಿ ಸಂತೈಸಿ, ರಾಜಕೀಯ ಭವಿಷ್ಯ ರೂಪಿಸಲು ತುಮಕೂರಿನಲ್ಲಿ ಟಿಕೆಟ್ ಕೊಟ್ಟು ಈಗ ಕೇಂದ್ರ ಸಚಿವರನ್ನಾಗಿ ಮಾಡಿದ್ದಾರೆ.ಅಮ್ಮನಪುರ ಮಲ್ಲೇಶ್ಬಿಜೆಪಿ ರೈತ ಮುಖಂಡ, ಚಾಮರಾಜನಗರ