ಜಿಲ್ಲೆ

ಮೋದಿ 3ನೇ ಬಾರಿಗೆ ಪ್ರಧಾನಿಯಾಗಿರುವುದು ದೇಶಕ್ಕೆ ಸಂತಸ

ಕಿರಣ್ ಮಾದರಹಳ್ಳಿ

ಹನೂರು; ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ 3ನೇ ಬಾರಿಗೆ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಜನತೆಗೆ ಸಂತಸ ತಂದಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್. ದತ್ತೇಶ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆ ಭಾನುವಾರ ರಾತ್ರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಮಗೆರೆ ಗ್ರಾಮದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 10 ವರ್ಷಗಳಲ್ಲಿ ಮೋದಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತ ನೀಡಿದ್ದರು. ಜತೆಗೆ ಪ್ರಪಂಚದ ಎಲ್ಲ ದೇಶದ ನಾಯಕರು ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿದ್ದರು. ಪ್ರಸ್ತುತ ದಿನದಲ್ಲಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಆಡಳಿತದಲ್ಲಿ ದೇಶದ ಜನತೆಗೆ ಉತ್ತಮ ಆಡಳಿತ ಸಿಗಲಿದೆ. ಜತೆಗೆ ದೇಶವು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿದೆ ಎಂದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ರಾಜ್ಯದಲ್ಲಿ ಹಿರಿಯ ನಾಯಕರ ನೇತೃತ್ವದಲ್ಲಿ ರಾಜ್ಯದಲ್ಲಿ 19 ಸ್ಥಾನವನ್ನು ಗೆಲ್ಲುವುದರ ಮೂಲಕ ಎನ್‌ಡಿಎ ಕೂಟಕ್ಕೆ ಶಕ್ತಿ ತುಂಬಲಾಗಿದೆ. ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಮಂತ್ರಿ ಸ್ಥಾನ ನೀಡುವ ಮೂಲಕ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಉತ್ತಮ ಅವಕಾಶ ನೀಡಿದ್ದಾರೆ ಎಂದು ತಿಳಿಸಿದರು.

ಎರಡು ಪಕ್ಷದ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಿ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದಾಗಿ 2 ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಮುಖಂಡರ ಶ್ರಮದಿಂದಾಗಿ ಉತ್ತಮ ಸ್ಥಾನ ಲಭಿಸಿದೆ. ಹಾಗಾಗಿ, ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲೂ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದರ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಮತದ ಅಂತರದಿಂದ ಗೆಲ್ಲಿಸಲು ಹೆಚ್ಚಿನ ಒತ್ತು ನೀಡಬೇಕು ಎಂದರು.

ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಜತೆಗೂಡಿ ಪಟಾಕಿ ಸಿಡಿಸಿ ಬಳಿಕ ನೆರೆದಿದ್ದವರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಮಂಡಲಾಧ್ಯಕ್ಷ ಸಿದ್ದಪ್ಪ, ಮುಖಂಡರಾದ ವೆಂಕಟೇಗೌಡ, ನಾಗೇಂದ್ರ, ಪುಟ್ಟಸ್ವಾಮೇಗೌಡ, ಜಯಣ್ಣ, ಬೇಕರಿ ರವಿ, ರಾಜು, ವೆಂಕಟೆಶ್, ಕುಮಾರ್ ಹಾಗೂ ಇನ್ನಿತರರು ಇದ್ದರು.