ಚಾಮರಾಜನಗರ: ಬಾಲಕಿಯ ವಿಡಿಯೋ ಚಿತ್ರೀಕರಿಸಿಕೊಂಡು, ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿದ್ದ ಚೀರನಹಳ್ಳಿಯ ಲೋಕೇಶ್ ಎಂಬಾತನ ವಿರುದ್ಧ ಪೋಕ್ಸೋ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಭಾನುವಾರ ಪ್ರಕರಣ ದಾಖಲಾಗಿದೆ.
ಕೆ.ಆರ್.ನಗರ ತಾಲೂಕಿನ ಗ್ರಾಮವೊಂದರ ಮಹದೇವನಾಯಕ (65), ಗೌರಮ್ಮ(53), ಪುತ್ರಿ ಲೀಲಾವತಿ(34) ಹಾಗೂ ಸಂತ್ರಸ್ತೆ ಬಾಲಕಿ (17) ಮಲೆಮಹದೇಶ್ವರ ಬೆಟ್ಟದ ತಾಳುಬೆಟ್ಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಹದೇವನಾಯಕ ಸ್ಥಳದಲ್ಲೇ ಮೃತ ಪಟ್ಟಿದ್ದರೆ, ಗಂಭೀರಗೊಂಡಿದ್ದ ಗೌರಮ್ಮ, ಲೀಲಾವತಿ ಹಾಗೂ ಬಾಲಕಿಯನ್ನು ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರೋಪಿ ಲೋಕೇಶ್ ಗಲಾಟೆ ಮಾಡಿರುವ ಸಂಬಂಧ ತಮ್ಮ ತಂದೆ ಮಹದೇವನಾಯಕ ಅವರು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿರುವುದೇ ನಮ್ಮ ಕುಟುಂಬ ಆತ್ಮಹತ್ಯೆಗೆ ಯತ್ನಿಸಲು ಕಾರಣ. ಬಾಲಕಿ ಅಶ್ಲೀಲ ವಿಡಿಯೋ ಮಾಡಿರುವ ಲೋಕೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹದೇವನಾಯಕ ಅವರ ಪುತ್ರ ಮಂಜುನಾಯಕ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಲೋಕೇಶ್ ವಿರುದ್ಧ ಪೋಕ್ಸೋ, ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಲೀಲಾವತಿ ಸ್ಥಿತಿ ಗಂಭೀರ:
ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದಿದ್ದ ನಾಲ್ವರ ಪೈಕಿ ಲೀಲಾವತಿ ಎಂಬುವವರ ಸ್ಥಿತಿ ತೀರಾ ಗಂಭೀರವಾಗಿದೆ. ಇವರು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೌರಮ್ಮ ಮತ್ತು ಅವರ ಮೊಮ್ಮಗಳು ಸಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಮ್ಸ್ ವೈದ್ಯಾಧಿಕಾರಿ ಡಾ.ಮಹೇಶ್ ವಿಜಯವಾಣಿಗೆ ತಿಳಿಸಿದರು. ಮಹದೇವನಾಯಕ ಅವರ ಶವಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ.
ಪೋಲೀಸ್ ಅಧಿಕಾರಿಗಳ ಅಮಾನತು:
ಕೆ.ಆರ್.ನಗರದ ಚೀರನಹಳ್ಳಿಯ ಯುವಕ ಲೋಕೇಶ್ ವಿರುದ್ಧ ಮಹದೇವನಾಯಕ ಅವರ ಕುಟುಂಬದವರು ದೂರು ನೀಡಲು ಬಂದಾಗ ಕರ್ತವ್ಯ ಲೋಪ ಎಸಗಿದ ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕೆ.ಆರ್.ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ.ಪಿ.ಸಂತೋಷ್, ಎಎಸ್‌ಐ ಗಿರೀಶ್ ಹಾಗೂ ಮುಖ್ಯ ಪೇದೆ ರಾಘವೇಂದ್ರ ಅವರು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸೇವೆಯಿಂದ ಅಮಾನತು ಮಾಡಲಾಗಿದೆ.
ತಪ್ಪಿಸ್ಥತರ ವಿರುದ್ಧ ಕಠಿಣ ಶಿಕ್ಷೆಗೆ ಆಗ್ರಹ:
ಮಾನಕ್ಕೆ ಹೆದರಿ ವಿಷಸೇವಿಸಿ ಮೃತಪಟ್ಟ ಕೆ.ಆರ್.ನಗರ ತಾಲೂಕಿನ ಗ್ರಾಮವೊಂದರ ಮಹದೇವನಾಯಕ ಹಾಗೂ ಮೂವರು ಚಿಂತಾಜನಕ ಸ್ಥಿತಿಯಲ್ಲಿರುವ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸಬೇಕು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಒತ್ತಾಯಿಸಿದ್ದಾರೆ.