ಜಿಲ್ಲೆ

ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ಹೊರಗುತ್ತಿಗೆ ನೌಕರರ ಮೇಲಿನ ದೌರ್ಜನ್ಯ ಖಂಡಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷ ಯರಗಂಬಳ್ಳಿ ಪರಶಿವಮೂರ್ತಿ ಹೇಳಿದರು.

ಜಿಲ್ಲೆಯ ಸಮಾಜ ಕಲ್ಯಾಣ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಹಾಸ್ಟೆಲ್ ಮತ್ತು ಕಚೇರಿಯಲ್ಲಿ 200 ಕ್ಕೂ ಹೆಚ್ಚು ಮಹಿಳೆ ಮತ್ತು ಪುರುಷ ಹೊರಗುತ್ತಿಗೆ ನೌಕರರು ಕಳೆದ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದಿನ ಏಜೆನ್ಸಿಗಳು ನೌಕರರಿಗೆ ಸಕಾಲದಲ್ಲಿ ಸರಿಯಾಗಿ ವೇತನ, ಇಎಸ್‌ಐ ಮತ್ತು ಪಿಎಫ್ ನೀಡಿ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, 2022 ರಿಂದ ಮೈಸೂರಿನ ಕಾಂತಿ ಏಜೆನ್ಸಿ ಎಂಬುವವರು ಟೆಂಡರ್ ವಹಿಸಿಕೊಂಡ ನಂತರ ಅನಗತ್ಯ ತೊಂದರೆ ಸೃಷ್ಟಿಸಿ ನೌಕರರಿಗೆ ಸರಿಯಾಗಿ ವೇತನ ನೀಡದೆ ಇರುವುದು ಅತ್ಯಂತ ಖಂಡನೀಯ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹೊರಗುತ್ತಿಗೆ ನೌಕರರ ಇಎಸ್‌ಐ ಮತ್ತು ಪಿಎಫ್ ಅನ್ನು 5-6 ವರ್ಷಗಳಿಂದ ಕಟ್ಟದೆ ವಂಚಿಸುತ್ತಿದ್ದು, ಕೆಲಗುತ್ತಿಗೆ ನೌಕರರು ತಮಗೆ ಬರಬೇಕಾದ ಇ.ಎಸ್.ಐ ಮತ್ತು ಪಿ.ಎಫ್ ಕೊಡಿಸಿಕೊಡುವಂತೆ ನಮ್ಮ ವೇದಿಕೆಗೆ ಮನವಿ ಮಾಡಿರುತ್ತಾರೆ. ಆದರೆ ನೌಕರರ ಇ.ಎಸ್.ಐ ಮತ್ತು ಪಿ.ಎಫ್ ಖಾತೆಗೆ ಕೆಲ ತಿಂಗಳು ಹಣ ಪಾವತಿಸದೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿರುತ್ತದೆ. ಈ ಬಗ್ಗೆ ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರಾಗಿ ಕೆಲಸ ನಿರ್ವಹಿಸುತ್ತಿದ್ದ ಗುರುಸ್ವಾಮಿ ಎಂಬಾತನೇ ಇದಕ್ಕೆಲ್ಲ ಕಾರಣ ಎಂದು ಈತನ ಮೇಲೆ ಪುರಾವೆಗಳಿಲ್ಲದ ಆರೋಪವನ್ನು ಸೃಷ್ಟಿಸಿ ಅಧಿಕಾರಿಗಳು ಏಜೆನ್ಸಿ ತೆ ಶಾಮೀಲಾಗಿ ಈತನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ನಿಯಮ ಉಲ್ಲಂಘಿಸಿ ಕೆಲಸದಿಂದ ತೆಗೆಯಲ್ಪಟ್ಟಿರುವ ನೌಕರರನ್ನು ಕೂಡಲೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಹೊರಗುತ್ತಿಗೆ ನೌಕರರಿಗೆ 3 ತಿಂಗಳ ವೇತನ, ಇಎಸ್‌ಐ, ಪಿಎಫ್ ಕೊಡಿಸುವ ಮೂಲಕ ನ್ಯಾಯ ಕೊಡಿಸಬೇಕು ಎಂದು ಮೇಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಗೋಷ್ಠಿಯಲ್ಲಿ ಯಳಂದೂರು ತಾಲೂಕು ಬಾಬುಜಗಜೀವನರಾಂ ವೇದಿಕೆ ಅಧ್ಯಕ್ಷ ಕೆಸ್ತೂರು ಮರಪ್ಪ, ಜೋಗಿಸಿದ್ದಯ್ಯ, ನಂಜುಂಡಸ್ವಾಮಿ, ರೇಣುಕಾ ಹಾಜರಿದ್ದರು.