ಹನೂರು; ಪಟ್ಟಣದ ಹೊರವಲಯದಲ್ಲಿ ಬುಧವಾರ ಸಂಜೆ ಬೀದಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಜಿಂಕೆಯೊಂದು ಬಾವಿಗೆ ಬಿದ್ದು ಮೃತಪಟ್ಟಿದೆ.
ಸಂಜೆ 5.30ರಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ಜಿಂಕೆಯೊಂದು ಪಟ್ಟಣದ ಹೊರ ವಲಯದ ಮ.ಬೆಟ್ಟದ ಮುಖ್ಯ ರಸ್ತೆಯಲ್ಲಿರುವ ಜಮೀನೊಂದಕ್ಕೆ ಬಂದಿತ್ತು. ಈ ವೇಳೆ ಬೀದಿ ನಾಯಿಗಳು ಅಟ್ಟಾಡಿಸಿದಾಗ ಜಿಂಕೆಯು ನೀರಿದ್ದ 80 ಅಡಿ ಆಳದ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸಿಬ್ಬಂದಿ ಜತೆ ಸ್ಥಳಕ್ಕಾಗಮಿಸಿದ ಡಿಆರ್‌ಎಫ್ ಸಾಲನ್ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ಬಾವಿಯಿಂದ ಮೇಲೆಕ್ಕೆತ್ತಿದರು. ಆದರೆ ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿತ್ತು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್ ನಾಯಕ್, ಸಿಬ್ಬಂದಿ ಪೆರಿಯ ನಾಯಗಂ, ಪ್ರವೀಣ್, ಮುನಿಶಾಂತ, ಅಶೋಕ್ ಭಾಗವಹಿಸಿದ್ದರು.