ಜಿಲ್ಲೆ

ಮಕ್ಕಳಲ್ಲಿ ಉಲ್ಬಣವಾಗುತ್ತಿದೆ ವಾಂತಿಭೇದಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ಕಳೆದ ತಿಂಗಳಿಂದ ನಿರಂತರ ಮಳೆಯಾಗುತ್ತಿರುವ ಪರಿಣಾಮವಾಗಿ ಹಲವೆಡೆ ಕಲುಷಿತ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿ ವಾಂತಿಬೇಧಿ ಉಲ್ಬಣವಾಗುತ್ತಿದೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ನೀಡಿರುವ ಮಾಹಿತಿಯ ಪ್ರಕಾರ ಈ ವರ್ಷದ ಮೇ, ತಿಂಗಳಲ್ಲಿ 20-30 ವಾಂತಿಭೇದಿ ಪ್ರಕರಣಗಳು ದಾಖಲಾಗಿತ್ತು. ಜೂನ್ ತಿಂಗಳಲ್ಲಿ 10-12 ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, ಕಳೆದೊಂದು ವಾರದಿಂದ ಅತಿಸಾರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರತಿನಿತ್ಯವೂ 3-4 ಮಕ್ಕಳು ವಾಂತಿ ಬೇಧಿ ಎಂದು ದಾಖಲಾಗುತ್ತಿದ್ದಾರೆ. ಅದಲ್ಲದೇ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಹಲವರು ಮಕ್ಕಳ ವಾಂತಿಬೇಧಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚುತ್ತಿರುವ ತಾಪಮಾನ, ನಿರಂತರ ಮಳೆ, ಮೋಡಕವಿದ ವಾತಾವರಣ, ಹವಾಮಾನ ಬದಲಾವಣೆಯಿಂದ ಅತಿಸಾರ ಕಾಯಿಲೆಯ ಹರಡುವಿಕೆ ಹೆಚ್ಚಾಗುತ್ತಿದೆ. ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ವಾಂತಿಭೇದಿ ಕಾಣಿಸಿಕೊಳ್ಳುತ್ತಿದೆ.

ಹಲವಾರು ಗ್ರಾಮೀಣ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಕಲುಷಿತ ನೀರು ನಿಲ್ಲುವುದು, ನೊಣಗಳ ಹಾವಳಿ, ರಸ್ತೆಯ ಬದಿಯಲ್ಲಿ ಮಾರಾಟಮಾಡುವ ಹಣ್ಣು ಮತ್ತು ಇನ್ನಿತರೆ ಪದಾರ್ಥಗಳ ತ್ತಿನ್ನುವಿಕೆ, ಅತಿಯಾದ ಆಹಾರ ಸೇವನೆ ಅತಿಸಾರ ಪ್ರಕರಣ ಏರಿಕೆಯಾಗಲು ಕಾರಣವಾಗುತ್ತಿದೆ. ಮಕ್ಕಳಲ್ಲಿ ಅತಿಸಾರದಿಂದ ಮಗುವಿನ ಜೀರ್ಣಾಂಗಗಳಲ್ಲಿ ಸಮಸ್ಯೆ ಕೂಡ ಕಂಡು ಬರುತ್ತಿದೆ. ಹೀಗಾಗಿ ಅತಿಸಾರದ ಲಕ್ಷಣಗಳಾದ ವಾಂತಿ ಬೇಧಿ,ಹೊಟ್ಟೆಯಲ್ಲಿ ಸೆಳೆತ ಅಥವಾ ಉಬ್ಬುವುದು,ಕರುಳಿನ ನೋವು, ಸುಸ್ತು, ಮೈ ಕೈ ನೋವು, ಜ್ವರ, ವಾಕರಿಕೆಯಂತ ಲಕ್ಷಣಗಳು ಕಂಡುಬಂದರೆ ಮಕ್ಕಳನ್ನು ತಕ್ಷಣಕ್ಕೆ ವೈದ್ಯರ ಬಳಿಗೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ಪಡೆಯುವಂತೆ ಜಿಲ್ಲಾ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಕಲುಷಿತ ವಾತಾವರಣ:
ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಹಳ್ಳ-ಕೊಳ್ಳಗಳಲ್ಲಿ ಹಾಗೂ ಚರಂಡಿಗಳಲ್ಲಿ ಮಳೆನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಮನೆಗಳ ಮುಂದೆ ಅಶುಚಿತ್ವ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ವಿವಿಧ ಸಾಂಕ್ರಾಮಿಕ ರೋಗಗಳು ಹರಡುತ್ತಿದೆ. ಕೆಲವು ಕಡೆಗಳಲ್ಲಿ ಶಿಶು ಮಕ್ಕಳಲ್ಲೇ ವಾಂತಿಬೇಧಿ ಹೆಚ್ಚಾಗುತ್ತಿದ್ದು, ಪಾಲಕರು ಆತಂಕ ಅನುಭವಿಸುವಂತಾಗಿದೆ. ಸಾಮಾನ್ಯವಾಗಿ ಗ್ಯಾಸ್ಟ್ರೋಎಂಟರೈಟಿಸ್, ಅಜೀರ್ಣ, ವೈರಲ್ ಸೋಂಕುಗಳು, ಆಹಾರ ಅಲರ್ಜಿಗಳು ಮತ್ತು ತೀವ್ರವಾದ ಕೆಮ್ಮು ವಾಂತಿಗೆ ಕಾರಣವಾಗುತ್ತದೆ. ಮಕ್ಕಳಲ್ಲಿ 3-4 ಬಾರಿ ವಾಂತಿಯಾಗಬಹುದು, ಇದು ಕೆಲವೊಮ್ಮೆ ಹೆಚ್ಚು ಗಂಭೀರವಾಗಬಹುದು.
ಮನೆಗಳಲ್ಲಿ ಮಕ್ಕಳು ಕೈಗೆ ಸಿಕ್ಕುವ ಪದಾರ್ಥಗಳನ್ನು ಮುಟ್ಟುವುದರಿಂದ, ಬಾಯಿಗೆ ಹಾಕಿಕೊಳ್ಳುವುದರಿಂದ, ಹೆಚ್ಚು ಆಹಾರ ಸೇವನೆ ಮಾಡುವುದರಿಂದ, ಗಟ್ಟಿ ಪದಾರ್ಥಗಳ ಸೇವನೆ, ಕಲುಷಿತ ನೀರು ಸೇವನೆ ಮಾಡುವುದರಿಂದ ವಾಂತಿಬೇಧಿ ಕಂಡುಬರುತ್ತಿದೆ. ಕೆಲವು ಮಕ್ಕಳಲ್ಲಿ ಜ್ವರವಿದ್ದು, ಸೋಂಕು ತಗುಲುವುದರಿಂದಲೂ ವಾಂತಿಬೇಧಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯವಾಣಿಗೆ ಮಾಹಿತಿ ನೀಡಿದರು.

ನೊಣಗಳ ಹಾವಳಿ:
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಸಿ ತ್ಯಾಜ್ಯಗಳು ಹೆಚ್ಚಾಗಿ ಕೊಳೆಯುತ್ತಿದ್ದು, ಇದರಿಂದ ಹೆಚ್ಚಾಗಿ ನೊಣಗಳು ಉತ್ಪತ್ತಿಯಾಗುತ್ತಿದೆ. ಮಳೆಗಾಲ, ಹಲಸು ಮತ್ತು ಮಾವಿನ ಕಾಲದಲ್ಲಿ ಹೆಚ್ಚಾಗಿ ನೊಣಗಳು ಕಾಣಿಸಿಕೊಳ್ಳುವುದು ಸಹಜ. ಗ್ರಾಮೀಣ ಪ್ರದೇಶದ ಮನೆಗಳ ಮುಂದೆ ನಿಲ್ಲುವ ಕಲುಷಿತ ನೀರಿನಿಂದ, ಕೊಳೆತ ಆಹಾರ ಪದಾರ್ಥಗಳಿಂದ ಮನೆಯ ಹೊರ ಮತ್ತು ಒಳಗೂ ಹೆಚ್ಚು ನೊಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಮಕ್ಕಳಲ್ಲಿ ಸೋಂಕು ಹರಡುತ್ತಿದೆ ಎಂದು ಹೇಳಲಾಗುತ್ತಿದೆ. ಮನೆಗಳಲ್ಲಿ ಮುಚ್ಚದೇ ಇಟ್ಟಿರುವ ಕುಡಿಯುವ ನೀರು, ಹಣ್ಣು, ತರಕಾರಿ, ಸಿಹಿತಿನಿಸುಗಳು ಹಾಗೂ ಇನ್ನಿತರೆ ಆಹಾರ ಪದಾರ್ಥಗಳ ಮೇಲೆ ನೊಣಗಳು ಕುಳಿತಾಗ ಅವುಗಳನ್ನು ಮಕ್ಕಳು ಸೇವನೆ ಮಾಡುವುದರಿಂದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಮಕ್ಕಳಲ್ಲಿ ವಾಂತಿ ಬೇಧಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ನೊಣಗಳಿಂದ ಮಕ್ಕಳನ್ನು ದೂರ ಇರುವಂತೆ ಪಾಲಕರು ನೋಡಿಕೊಳ್ಳಬೇಕಾಗಿದೆ.

ಪಾಲಕರಲ್ಲಿ ಜಾಗೃತಿ ಅಗತ್ಯ:
ಮಕ್ಕಳಲ್ಲಿ ವಾಂತಿ ಬೇಧಿ ಕಾಣಿಸಿಕೊಳ್ಳದಂತೆ ಪಾಲಕರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ. ಮಳೆಗಾಲದಲ್ಲಿ ಮಕ್ಕಳು ಇರುವ ಮನೆಯ ಸುತ್ತಲೂ ಶುಚಿತ್ವವನ್ನು ಕಪಾಡಿಕೊಳ್ಳಬೇಕಾಗಿದೆ. ಕಲುಚಿತ ನೀರು ಸೇವನೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳಲ್ಲಿ ನಿರ್ಜಲೀಕರಣ ವಾಗುವಂತಹ ಆಹಾರ ಪದಾರ್ಥಗಳನ್ನು ಕೊಡಬಾರದು. ಯಾವುದೇ ಕಾರಣಕ್ಕೂ ಗಟ್ಟಿಪದಾರ್ಥಗಳನ್ನು ಮಕ್ಕಳಿಗೆ ನೀಡಬಾರದು. ಮಕ್ಕಳಲ್ಲಿ ವಾಂತಿ ಕಂಡು ಬಂದ ತಕ್ಷಣ 5-10 ನಿಮಿಷಗಳ ನಡುವಿನಲ್ಲಿ ಓಆರ್‌ಎಸ್ ಅನ್ನು ನೀರಿನಲ್ಲಿ ಬೆರಿಸಿ ಕುಡಿಸಬೇಕು. ನಂತರ ಹತ್ತಿರದ ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಹೋಗಿ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಪಾಲಕರು ಮಕ್ಕಳಲ್ಲಿ ವಾಂತಿಬೇಧಿ ಕಾಣಿಸಿಕೊಂಡಾಗ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಸಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸಚಿಕಿತ್ಸಕ ಡಾ.ಕೃಷ್ಣಪ್ರಸಾದ್ ವಿಜಯವಾಣಿಗೆ ಮಾತನಾಡಿ ಸಲಹೆ ನೀಡಿದರು.

ಬೇಸಿಗೆ, ಮಳೆಗಾಲ, ಜಾತ್ರೆ, ಮದುವೆ ಹಾಗೂ ಇನ್ನಿತರೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ವಾಂತಿಬೇಧಿ ಸಹಜವಾಗಿ ಕಾಣಿಸಿಕೊಳ್ಳುತ್ತಿರುತ್ತದೆ. ಇತ್ತೀಚೆಗೆ ನಿತ್ಯವೂ ಸಾಕಷ್ಟು ಪ್ರಕರಣ ದಾಖಲಾಗುತ್ತಿದೆ. 5 ಕ್ಕಿಂತಲೂ ಹೆಚ್ಚು ಪ್ರಕರಣಗಳು ಅಥವಾ ಒಂದೇ ಮನೆಯಲ್ಲಿ ಹೆಚ್ಚು ವಾಂತಿಬೇಧಿ ಪ್ರಕರಣಗಳು ಸಂಕ್ರಾಮಿಕ ರೋಗಗಳ ನಿಯಂತ್ರಣ ಘಟಕಕ್ಕೆ ಸೂಚನೆ ನೀಡುತ್ತೇವೆ, ಅವರು ಮುಂಜಾಗೃತ ಕ್ರಮವಹಿಸುತ್ತಾರೆ.ಡಾ.ಕೃಷ್ಣಪ್ರಸಾದ್, ಜಿಲ್ಲಾ ಶಸ ಚಿಕಿತ್ಸಕ, ಸಿಮ್ಸ್ ಆಸ್ಪತ್ರೆ, ಚಾಮರಾಜನಗರ ಮಕ್ಕಳು ಕಲುಷಿತ ನೀರು, ಆಹಾರ ಸೇವನೆ ಮಾಡುವುದರಿಂದ ವಾಂತಿಬೇಧಿ ಉಂಟಾಗುತ್ತದೆ. ಮುಂಜಾಗೃತ ಕ್ರಮವಾಗಿ ಈಗಾಗಲೇ ಆಶಾ ಕಾರ್ಯಕರ್ತರ ಮೂಲಕ ಮನೆಗಳಿಗೆ ಓಆರ್‌ಎಸ್ ಪೌಡರ್ ವಿತರಣೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ.ಡಾ.ಚಿದಂರಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ, ಚಾಮರಾಜನಗರ