ಚಾಮರಾಜನಗರ: ಚಾಮರಾಜನಗರಕ್ಕೆ ಅಂಟಿಕೊಂಡಿದ್ದ ಮೌಢ್‌ಕ್ಕೆ ಪದೆ ಪದೇ ಸೆಡ್ಡು ಹೊಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಯನ್ನು ಲೋಕಸಭೆ ಚುನಾವಣೆಯಲ್ಲಿ ಉಳಿಸಿದ್ದೇ ಚಾಮರಾಜನಗರ ಕ್ಷೇತ್ರ.
‘ಚಾಮರಾಜನಗರಕ್ಕೆ ಬಂದರೆ 6 ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ’ ಎನ್ನುವ ಮೂಢನಂಬಿಕೆಗೆ ಅವಕಾಶ ಸಿಕ್ಕಾಗಲೆಲ್ಲಾ ಸಿದ್ದರಾಮಯ್ಯ ಮದ್ದು ಅರೆಯುತ್ತಿದ್ದಾರೆ. ಈ ಹಿಂದೆ ಇವರು ಸಿಎಂ ಆಗಿದ್ದಾಗ 10ಕ್ಕೂ ಹೆಚ್ಚು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದರು. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಈಗಾಗಲೇ ಎರಡ್ಮೂರು ಬಾರಿ ಬಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಚಾರದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಹಲವು ಬಾರಿ ಚಾಮರಾಜನಗರಕ್ಕೆ ಆಗಮಿಸಿ ಗೆಲುವಿನ ವೇದಿಕೆಯನ್ನು ಸೃಷ್ಟಿ ಮಾಡಿದರು. ಮೈಸೂರಿನಲ್ಲೇನೋ
ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಸೋತು ಮುಖಭಂಗ ಉಂಟಾಯಿತು. ಆದರೆ ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಪ್ರತಿಷ್ಠೆಯನ್ನು ಉಳಿಸಿದರು.
ಟಿಕೆಟ್ ಕೊಡಿಸಿದ್ದೇ ಸಿಎಂ:
ತನ್ನ ಆಪ್ತ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್‌ಬೋಸ್ ಪರ ಬ್ಯಾಟಿಂಗ್ ಮಾಡಿ ಟಿಕೆಟ್ ಕೊಡಿಸಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ. ಎಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿರುವ ಜಿ.ಎನ್.ನಂಜುಂಡಸ್ವಾಮಿ ಟಿಕೆಟ್ ಪಡೆಯುವ ರೇಸ್‌ನಲ್ಲಿ ಇದ್ದರು. ಆದರೆ ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಸುನೀಲ್‌ಬೋಸ್‌ಗೆ ಟಿಕೆಟ್ ನೀಡಬೇಕೆಂದು ಕೇಳಿಕೊಂಡಿದ್ದರಿಂದ ಜಿ.ಎನ್.ನಂಜುಂಡಸ್ವಾಮಿ ಪ್ರಯತ್ನ ನಿಂತು ಹೋಯಿತು.
ಗೇಮ್ ಪ್ಲ್ಯಾನರ್ ಸಿದ್ದು:
ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಖಾಡಕ್ಕಿಳಿದು ವಿಶೇಷ ಆಸಕ್ತಿ ತೋರಿದ್ದರು.
ಈ ಸಂಬಂಧ ಮೈಸೂರಿನಲ್ಲಿ ಸಭೆ ನಡೆಸಿದ್ದರು. ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲುವ ಸಲುವಾಗಿ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಸಭೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಭಾಗವಹಿಸಿದ್ದರು. ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯನ್ನು ೋಷಣೆ ಮಾಡುವುದಕ್ಕೂ ಮೊದಲೇ ಸಿಎಂ ಸಿದ್ದರಾಮಯ್ಯ ಶಾಸಕರ ಬಳಿ ಅಭಿಪ್ರಾಯ ಸಂಗ್ರಹಿಸಿದ್ದರು. ನಂತರ ೆನ್ ಕರೆ ಮೂಲಕ ಶಾಸಕರಿಗೂ ಆಯ್ಕೆಯಾಗುವ ಅಭ್ಯರ್ಥಿ ಸುನೀಲ್‌ಬೋಸ್ ಎಂದು ಹೇಳಿ ಇವರನ್ನು ಗೆಲ್ಲಿಸಲು ಸೂಚನೆ ನೀಡಿದ್ದರು.
ಕ್ಷೇತ್ರ ಸುತ್ತಿ ಪ್ರಚಾರ:
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಸುನೀಲ್‌ಬೋಸ್ ಗೆಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಪ್ರಚಾರ ಮಾಡಿದರು. ನಾಮಪತ್ರ ಸಲ್ಲಿಕೆಗಾಗಿ ಚಾಮರಾಜನಗರದಲ್ಲಿ ಭರ್ಜರಿ ರೋಡ್ ಶೋ ಮಾಡಿದ್ದರು. ಕೊಳ್ಳೇಗಾಲ, ಗುಂಡ್ಲುಪೇಟೆ ಸಮಾವೇಶದಲ್ಲಿ ಭಾಗಿಯಾಗಿ ಮತ ಕೇಳಿದ್ದರು. ಆಪರೇಷನ್ ಹಸ್ತಕ್ಕೆ ಕೈ ಹಾಕಿ ತನ್ನ ಸಮ್ಮುಖದಲ್ಲೇ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡರು. ಬೇರೆ ಪಕ್ಷಗಳ ಹಲವು ನಾಯಕರಿಗೂ ಸ್ವತಃ ಸಿದ್ದರಾಮಯ್ಯ ಅವರೇ ೆನ್ ಕರೆ ಮಾಡಿ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಹೇಳಿದ್ದರಂತೆ. ಯತೀಂದ್ರ ಸಿದ್ದರಾಮಯ್ಯ ಕೂಡ ಎಲ್ಲ ಕ್ಷೇತ್ರಗಳನ್ನು ಸುತ್ತಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.
ಅನಾರೋಗ್ಯದಲ್ಲೂ ಪ್ರಚಾರ ನಿಲ್ಲಿಸಿರಲಿಲ್ಲ ಶೆಟ್ರು:
ಸಿಎಂ ಸಿದ್ದರಾಮಯ್ಯಗೆ ಚಾಮರಾಜನಗರ ಶಾಸಕ ಮತ್ತು ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಆಪ್ತ. ಒಂದರ್ಥದಲ್ಲಿ ಶಿಷ್ಯ ಎಂದೇ ಹೇಳಬಹುದು. ಚಾಮರಾಜನಗರ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಸುನೀಲ್‌ಬೋಸ್ ಪರ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ಗುರು ಸಿದ್ದರಾಮಯ್ಯ ಶಿಷ್ಯ ಸಿ.ಪುಟ್ಟರಂಗಶೆಟ್ಟಿಗೆ ತಾಕೀತು ಮಾಡಿದ್ದರು. ಅಲ್ಲದೇ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಸಿ.ಪುಟ್ಟರಂಗಶೆಟ್ಟಿ ನಡುವೆ ವಿಶೇಷ ಒಡನಾಟವಿದೆ. ಇವರ ಮಗನನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದರು.
ಆರೋಗ್ಯ ಸರಿ ಇಲ್ಲದಿದ್ದರೂ ಚುನಾವಣಾ ಪ್ರಚಾರವನ್ನು ನಿಲ್ಲಿಸಲಿಲ್ಲ. ಮುಂಗೈ ಮೇಲೆ ಸೂಜಿ ಚುಚ್ಚಿಸಿಕೊಂಡು ಊರೂರು ಸುತ್ತಿ ಮತ ಕೇಳಿದ್ದರು. ಮತ್ತೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಚುನಾವಣೆಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-91059, ಬಿಜೆಪಿ-70733 ಮತಗಳನ್ನು ಪಡೆದು 20,326 ಅಂತರದಿಂದ ಮುನ್ನಡೆ ಸಾಧಿಸಿತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿ.ಶ್ರೀನಿವಾಸಪ್ರಸಾದ್-76099, ಧ್ರುವನಾರಾಯಣ್-66418 ಮತಗಳನ್ನು ಪಡೆದು ಕಾಂಗ್ರೆಸ್ 9,681 ಮತಗಳ ಹಿನ್ನಡೆ ಅನುಭವಿಸಿತ್ತು.
ವರುಣದಲ್ಲೇ ಅಧಿಕ ಲೀಡ್:
ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣದಲ್ಲಿ ಕಾಂಗ್ರೆಸ್‌ಗೆ ಅಧಿಕ ಮತಗಳ ಲೀಡ್ ದೊರೆತಿದೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-107203, ಬಿಜೆಪಿ-73851 (ಅಂತರ 33,352), ಕಡಿಮೆ ಲೀಡ್ ಎಂದರೆ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-76722, ಬಿಜೆಪಿ-73801 (ಅಂತರ 2,921)ಮತಗಳು ಸಿಕ್ಕಿವೆ.