ಜಿಲ್ಲೆ

ಕಮಲಕ್ಕೆ ಒಗಟು, ಕೈಗೆ ಒಗ್ಗಟ್ಟು..!

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯ ಲಿತಾಂಶ ‘ಕಮಲ’ಕ್ಕೆ ಸುಲಭವಾಗಿ ಬಿಡಿಸಬಹುದಾದ ಒಗಟು, ‘ಕೈ’ಪಾಲಿಗೆ ಬಲವಾದ ಒಗ್ಗಟ್ಟು.

ವೀರೋಚಿತವಲ್ಲದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್(5,62965 ಮತಗಳು) ಸೋಲಿನ ಒಗಟನ್ನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ ಸರಳವಾಗಿ ಬಿಡಿಸಬಲ್ಲ. ವೀರಾವೇಶದ ಅಂತರ ಸೃಷ್ಟಿಸಿದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ (7,51,671 ಮತಗಳು) ಗೆಲುವಿನ ಅಡಿಪಾಯದಲ್ಲಿ ಒಗ್ಗಟ್ಟು ಅಡಗಿದೆ.

ಎಲೆಕ್ಷನ್ ಬರುತ್ತಿದ್ದಂತೆಯೇ ಹುಟ್ಟಿಕೊಳ್ಳುವ ಆಕಾಂಕ್ಷಿಗಳ ದಂಡು, ಟಿಕೆಟ್ ಸಿಗದಿದ್ದಾಗ ಅಸಮಾಧಾನ ಹೊಗೆಯಾಡುವ ಪಕ್ಷ ಯಾವುದು? ಎಂಬ ಒಗಟಿಗೆ ಉತ್ತರವೇ ಚಾಮರಾಜನಗರ ಬಿಜೆಪಿ. ವಿಧಾನಸಭೆ ಚುನಾವಣೆ ಲಿತಾಂಶ ಇದಕ್ಕೆ ಸಾಕ್ಷಿಯಾಗಿತ್ತು. ಈಗ ಲೋಕಸಭೆ ಚುನಾವಣೆ ಲಿತಾಂಶದ ಸರದಿಯಾಗಿದೆ. ಚಾಮರಾಜನಗರ ವಿಧಾನಸಭೆ ಚುನಾವಣೆಯಲ್ಲಿ ಸೋತ ಸೋಮಣ್ಣ, ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಎಸ್.ಬಾಲರಾಜ್‌ಗೆ ಮೊದಮೊದಲು ಗೆದ್ದೇ ಗೆಲ್ಲುವ ವಾತಾವರಣ ಕಂಡಿತ್ತು. ನಂತರದ ದಿನಗಳಲ್ಲಿ ಹವಾಮಾನ ಬದಲಾವಣೆಯಾಗಿ ಸೋಲಿನ ಸಲುಗೆ ಬೆಳೆಸಬೇಕಾಯಿತು.‘ಗೆಲ್ಲುತ್ತೇನೆ ಎಂದು ಬಂದವರು ಸೋಲುವುದಕ್ಕೂ ಸಿದ್ಧರಾಗಬೇಕಾಯಿತು’.

ಈ ಸೋಲಿನಿಂದ ಪಾಠ ಕಲಿತ ವಿ.ಸೋಮಣ್ಣ ಅವರನ್ನು ತುಮಕೂರು ಲೋಕಸಭೆ ಚುನಾವಣೆ ಲಿತಾಂಶ ಸಂತೈಸಿದೆ. ಈ ರೀತಿಯಲ್ಲೇ ಎಸ್.ಬಾಲರಾಜ್ ಅವರಿಗೂ ಸಾಂತ್ವನ ಸಿಗಲು ದೀರ್ಘ ಸಮಯವೇ ಬೇಕಾಗಬಹುದು. ಅಲ್ಲಿಯವರೆಗೂ ಕಲಾವಿದರೂ ಆಗಿರುವ ಮಾಜಿ ಶಾಸಕ ಎಸ್.ಬಾಲರಾಜ್‌ಗೆ ‘ಕಲೆ’ಯೊಂದೇ ಸಮಾಧಾನದ ಸಂಗತಿ.

‘ಕೈ’ ಒಗ್ಗಟ್ಟಿನಲ್ಲಿ ಬಲವಿದೆ: ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆಯಲ್ಲೇ ಚಾಮರಾಜನಗರ ಲೋಕಸಭೆ ಚುನಾವಣೆಯ ಲಿತಾಂಶದ ಗೆಲುವು ಅಡಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಹೆಸರು ಅಧಿಕೃತ ೋಷಣೆಗೂ ಮೊದಲೇ ಸುನೀಲ್‌ಬೋಸ್‌ಗೆ ಟಿಕೆಟ್ ಸಿಗುತ್ತದೆ ಎಂದು ಮುಖಂಡರಿಗೆ ಗೊತ್ತಾಗಿ ಅವರೆಲ್ಲಾ ಮಾನಸಿಕವಾಗಿ ಸಿದ್ಧರಾಗಬೇಕಾಯಿತು.

ಸುನೀಲ್‌ಬೋಸ್‌ಗೆ ಟಿಕೆಟ್ ಕೊಟ್ಟರೆ ಗೆಲ್ಲುವುದು ಕಷ್ಟ ಎನ್ನುತ್ತಿದ್ದವರೇ ಮೈಚಳಿ ಬಿಟ್ಟು ಕೆಲಸ ಮಾಡಬೇಕಾದ ವಾತಾವರಣ ಪಕ್ಷದಲ್ಲಿ ಸೃಷ್ಟಿಯಾಗಿಬಿಟ್ಟಿತು. ಪಕ್ಷ ನಿಷ್ಠೆಗೆ ಮತ್ತೊಂದು ಹೆಸರೇ ಮಾಜಿ ಸಂಸದ ಆರ್.ಧ್ರುವನಾರಾಯಣ್. ಇವರ ಸಾವಿನ ಸಂದರ್ಭದಲ್ಲಿ ಹಬ್ಬಿದ ವಿವಾದ ಸುನೀಲ್‌ಬೋಸ್‌ಗೆ ವಿರೋಧಾಭಾಸ ಉಂಟು ಮಾಡಬಹುದೆಂಬ ಲೆಕ್ಕಾಚಾರವೂ ಇತ್ತು. ಆದರೆ ಧ್ರುವ ಬೆಂಬಲಿಗರು ಅವರಂತೆಯೇ ಪಕ್ಷ ನಿಷ್ಠೆ ತೋರಿದರು. ಬೋಸ್ ಅಕ್ಕ-ಪಕ್ಕದಲ್ಲೇ ಇದ್ದು ಗೆಲುವಿಗಾಗಿ ಕೆಲಸ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಶಾಸಕರು, ಮಾಜಿ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳ ಹೆಗಲೇರಿ ಲೀಡ್ ಕೊಡಿಸುವ ಜವಾಬ್ದಾರಿಯನ್ನು ಬೆನ್ನಿಗೆ ಕಟ್ಟಿದ್ದರು.

ವಿರೋಧಿಗಳನ್ನು ಸೃಷ್ಟಿಸುವ ಕಾಲವೇ ಚುನಾವಣೆ. ಇದು ಕೆಲವೊಮ್ಮೆ ಒಗ್ಗೂಡಿಸುವ ಕಾಲವಾಗಿಯೂ ಬದಲಾಗುತ್ತದೆ. ಬೇರೆಯಾಗಿದ್ದ ಹಳೆದೋಸ್ತಿಗಳಾದ ಸಿದ್ದರಾಮಯ್ಯ- ವಿ.ಶ್ರೀನಿವಾಸಪ್ರಸಾದ್ ಒಂದಾದರು. ಈ ಒಗ್ಗಟ್ಟಿನ ಮಂತ್ರ ಚುನಾವಣೆಯಲ್ಲಿ ರಣತಂತ್ರವಾಗಿ ಬದಲಾಯಿತು. ಸೈದ್ಧಾಂತಿಕ ಬದ್ಧತೆ ಹೊಂದಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ದಲಿತ ಸಂಘಟನೆಗಳ ಹಲವು ಮುಖಂಡರನ್ನು ಒಗ್ಗೂಡಿಸಿಕೊಂಡರು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8ರಲ್ಲಿ 7 ಕ್ಷೇತ್ರಗಳಲ್ಲಿ ಅಧಿಕ ಅಂತರದ ಗೆಲುವು ದಕ್ಕಿತು. ಉಳಿದ ಒಂದೇ ಒಂದು ಕ್ಷೇತ್ರವಾದ, ತವರೂರು ತಿ.ನರಸೀಪುರದಲ್ಲಿ ಮಾತ್ರ ದೊಡ್ಡ ಆಟ ನಡೆಯಲಿಲ್ಲ.

ತಿ.ನರಸೀಪುರದಲ್ಲಿ ತಗ್ಗಿದ ಬೋಸ್..?
ಸ್ವಕ್ಷೇತ್ರ ತಿ.ನರಸೀಪುರದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ಅಧಿಕ ಮತಗಳನ್ನು ಪಡೆದಿಲ್ಲ.
ಕಾಂಗ್ರೆಸ್-76722, ಬಿಜೆಪಿ-73801 ಮತ ಗಳಿಸಿದೆ. ಗೆಲುವಿನ ಅಂತರ 2921 ಮಾತ್ರ ಇದೆ. ಇಷ್ಟು ಸ್ಥಳೀಯರಲ್ಲಿ ಇರುವ ವಿರೋಧಗಳು ಅಂತರ ತಗ್ಗಿಸಿತು. ಬೇರೆ ಕ್ಷೇತ್ರಗಳಿಗೆ ಇದನ್ನು ವ್ಯಾಪಿಸಲು ಬಿಜೆಪಿ ಪ್ರಯತ್ನ ಮಾಡಿ ವಿಲವಾಯಿತು. ಇಲ್ಲಿ ಜೆಡಿಎಸ್ ಪ್ರಬಲವಾಗಿದೆ. ಮೈತ್ರಿ ಪಕ್ಷ ಬಿಜೆಪಿಗೆ ಮತಗಳನ್ನು ಕೊಡಿಸಲು ಶ್ರಮ ಹಾಕಿದೆ. ಹನೂರಿನಲ್ಲೂ ಜೆಡಿಎಸ್ ಶಾಸಕರಿದ್ದಾರೆ. ಎಂಎಲ್‌ಎ ಎಂ.ಆರ್.ಮಂಜುನಾಥ್ ಬಿಜೆಪಿ ಪರ ನಿಂತು ಪ್ರಚಾರ ಮಾಡಿದರು. ಆದರೆ ಲೀಡ್ ಕೊಡಿಸುವುದಿರಲಿ, ಪ್ರತಿಸ್ಪರ್ಧಿಯ ಲೀಡ್ ಅನ್ನೂ ಕಡಿಮೆ ಮಾಡಲು ಆಗಲಿಲ್ಲ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-96210, ಬಿಜೆಪಿ-59253 (ಅಂತರ-36957) ಮತಗಳನ್ನು ಪಡೆದುಕೊಂಡಿದೆ.

ಎನ್.ಮಹೇಶ್ ಲೆಕ್ಕಾಚಾರ ಉಲ್ಟಾ:
ಕೊಳ್ಳೇಗಾಲ ಮಾಜಿ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಲೆಕ್ಕಾಚಾರ ಎರಡನೇ ಸಲ ಉಲ್ಟಾ ಹೊಡೆದಿದೆ. ಮೊದಲನೆಯದಾಗಿ ವಿಧಾನಸಭೆ ಚುನಾವಣೆಯಲ್ಲಿ ತಾನೇ ಸೋತಿದ್ದಾಗ, ಎರಡನೇಯದಾಗಿ ಲೋಕಸಭೆ ಚುನಾವಣೆಯಲ್ಲಿ ತಾನು ಟಿಕೆಟ್ ಕೊಡಿಸಿದ ಎಸ್.ಬಾಲರಾಜ್ ಸೋತಿರುವಾಗ ಅಂದಾಜು ತಪ್ಪಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಆಪ್ತ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್‌ಬೋಸ್‌ಗೆ ಟಿಕೆಟ್ ಕೊಡಿಸಿ ಲೆಕ್ಕಾಚಾರ ಮುಗಿಸಿದರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-95228, ಬಿಜೆಪಿ-62212 (ಅಂತರ 33016) ಮತಗಳನ್ನು ಪಡೆದುಕೊಂಡಿತು. ಎಸ್.ಬಾಲರಾಜ್ ಸ್ವಕ್ಷೇತ್ರದಲ್ಲೇ ಈ ರೀತಿ ಭಾರಿ ಹಿನ್ನಡೆ ಅನುಭವಿಸುತ್ತಾರೆ ಎನ್ನುವುದು ಲೆಕ್ಕಾಚಾರಕ್ಕೆ ಸಿಕ್ಕಿರಲಿಲ್ಲ.