ಜಿಲ್ಲೆ

ಜಿಲ್ಲೆಯಲ್ಲಿ ಸೈಬರ್ ಅಪರಾಧಗಳು ಹೆಚ್ಚಳ

ಎ.ಎಸ್.ಮಣಿಕಂಠ

ಚಾಮರಾಜನಗರ: ಮೊಬೈಲ್ ತಂತ್ರಜ್ಞಾನ ಶ್ರೀಸಾಮಾನ್ಯರಿಗೆ ಎಷ್ಟು ಅನುಕೂಲವಾಗಿದೆಯೋ, ಅಷ್ಟೇ ತೊಂದರೆಯನ್ನು ಅನುಭವಿಸುವಂತಾಗಿದೆ. ಕೆಲವು ಸೈಬರ್ ವಂಚಕರು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಜನರಿಗೆ ವಂಚನೆ ಮಾಡುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಚಾಮರಾಜನಗರ ಸೈಬರ್, ಆರ್ಥಿಕ ಮತ್ತು ಮಾದಕದ್ರವ್ಯ ತಡೆ (ಸೆನ್) ಘಟಕದ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 2018 ನೇ ಸಾಲಿನಲ್ಲಿ 3 ಪ್ರಕರಣಗಳು ದಾಖಲಾಗಿದ್ದವು. 2019 ರಲ್ಲಿ ಅದು 21 ಪ್ರಕರಣಗಳಿಗೆ ಏರಿಕೆ ಕಂಡಿತ್ತು. 2020 ನೇ ಸಾಲಿನಲ್ಲಿ 8 ಪ್ರಕರಣಗಳು ದಾಖಲಾಗಿತ್ತು. 2021 ನೇ ಸಾಲಿನಲ್ಲಿ 7 ಪ್ರಕರಣ, 2022 ನೇ ಸಾಲಿನಲ್ಲಿ ಸುಮಾರು 13 ಪ್ರಕರಣ ದಾಖಲಾಗಿತ್ತು. 2023 ನೇ ಸಾಲಿನಲ್ಲಿ ಹೆಚ್ಚು ಎಂಬಂತೆ 24 ಪ್ರಕರಣಗಳು ದಾಖಲಾಗಿತ್ತು. ಪ್ರಸ್ತುತ ವರ್ಷದಲ್ಲಿ ಈವರೆಗೆ 6 ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಈ ವರೆಗೆ 87 ಪ್ರಕರಣಗಳು ದಾಖಲಾಗಿದೆ. ಸೈಬರ್ ವಂಚಕರು ಜನರಿಗೆ ವಂಚನೆ ಮಾಡಲು ತಂತ್ರಜ್ಞಾನದ ಮೂಲಕ ಹೊಸಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಅದರಂತೆ ವಂಚಕರು ಡೆಬಿಟ್ ಕಾರ್ಡ್, ಓಟಿಪಿ, ಉಡುಗೊರೆ, ಆರ್ಥಿಕ ವ್ಯವಹಾರ, ಉದ್ಯೋಗ ವಂಚನೆ, ಸಾಲದ ವಂಚನೆ, ಲಾಟರಿ ವಂಚನೆ ಮತ್ತು ಇತ್ತೀಚಿಗೆ ಹೂಡಿಕೆ ಹೆಸರಿನಲ್ಲಿ ಹೆಚ್ಚಿನ ಅಮಾಯಕ ಜನರನ್ನು ವಂಚಿಸುತ್ತಿದ್ದಾರೆ. ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಎಂಬ ವಂಚನೆಯ ಮೂಲಕ ವೈದ್ಯರು, ಇಂಜಿನಿಯರ್ ಪದವೀಧರರು ವಂಚನೆಗೆ ಒಳಗಾಗುತ್ತಿರುವುದು ಆತಂಕವನ್ನು ಉಂಟುಮಾಡುತ್ತಿದೆ. ಸೈಬರ್ ವಂಚಿತರು ಈ ಮೂಲಕ ಸಾರ್ವಜನಿಕರ ಹಣವನ್ನು ದೋಚುವ ಮಾರ್ಗವನ್ನು ಕಂಡುಕೊಂಡಿದ್ದು, ಸೆನ್ ಪೋಲಿಸರು ಇದಕ್ಕೆ ತಡೆಯಾಗಿ ನಿಂತಿದ್ದಾರೆ. ಅದಾಗ್ಯೂ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಸಾರ್ವಜನಿಕರು ಜಾಗೃತರಾಗಬೇಕಿದೆ.

ಹಲವು ರೀತಿಯ ವಂಚನೆ:
2018-2024 ರವರೆಗೆ ಸುಮಾರು 10 ಡೆಬಿಟ್ ಕಾರ್ಡ್ ವಂಚನೆ ಪ್ರಕರಣಗಳು ದಾಖಲಾಗಿದೆ. 23 ಓಟಿಪಿ ಮೂಲಕ ವಂಚನೆ ಮಾಡಿರುವ ಪ್ರಕರಣಗಳು ದಾಖಲಾಗಿದೆ. ಉಡುಗೊರೆ ಕಳುಹಿಸುವ ವಂಚನೆಯಲ್ಲಿ 6 ಪ್ರಕರಣ ದಾಖಲಾಗಿದೆ. ಉದ್ಯೋಗ ದೊರಕಿಸುವ ವಂಚನೆಯಲ್ಲಿ 8 ಪ್ರಕರಣ ದಾಖಲಾಗಿದೆ. ಹೊಡಿಕೆ ವಂಚನೆಯಲ್ಲಿ ಸುಮಾರು 10 ಪ್ರಕರಣಗಳು ದಾಖಲಾಗಿದೆ. ಉಳಿದಂತೆ ವ್ಯವಹಾರ ಮಾಡುವುದಾಗಿ ವಂಚಿಸುವುದು, ಸಾಲ ನೀಡುವುದಾಗಿ ವಂಚಿಸುವುದು, ಟವರ್ ಸ್ಥಾಪನೆ ಮಾಡುವುದಾಗಿ ವಂಚಿಸುವುದು, ಲಾಟರಿ ವಂಚನೆ, ಸಾಮಾಜಿಕ ಜಾಲತಾಣಗಳ ಮೂಲಕ ವಂಚಿಸುವುದು. ಮೊಬೈಲ್‌ಗಳಿಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ವಂಚಿಸುವುದು ಅಲ್ಲದೇ ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಎಂಬ ವಂಚನೆಯ ಮೂಲಕ ಹತ್ತಾರು ಜನರಿಗೆ ಮೋಸ ಮಾಡುತ್ತಲೇ ಇದ್ದಾರೆ.

ವೈದ್ಯರು ಮತ್ತು ಇಂಜಿನಿಯರ್‌ಗಳು ಬಲಿ:
ಸೈಬರ್ ವಂಚನೆಗೆ ಸಾಮಾನ್ಯ, ಮುಗ್ಧ ಜನರು ಅಲ್ಲದೇ ವೈದ್ಯರು ಮತ್ತು ಇಂಜಿನಿಯರ್‌ಗಳೇ ಬಲಿಯಾಗಿದ್ದಾರೆ. ಡಿಜಿಟಲ್ ಅರೆಸ್ಟ್ ಎಂಬ ಮಾಯಾಜಾಲಕ್ಕೆ ಕೆಲವು ವೈದ್ಯರು ಹಾಗೂ ಇಂಜಿನಿಯರ್‌ಗಳು ಸಿಲುಕಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಈ ಡಿಜಿಟಲ್ ಅರೆಸ್ಟ್‌ನಲ್ಲಿ ವಿಡಿಯೋ ಕರೆಮಾಡುವ ವಂಚಕರು ಪೊಲೀಸರು ಮತ್ತು ಸಿಬಿಐ ಹೆಸರಿನಲ್ಲಿ ಜನರನ್ನು ಎದುರಿಸಿ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸಲಾಗುತ್ತಿದ್ದಾರೆ. ಇತ್ತೀಚೆಗೆ ಕೊಳ್ಳೇಗಾಲದ ಅರುಣ್ ಕುಮಾರ್ ಎನ್ನುವವರು ಹೂಡಿಕೆ ಹೆಸರಿನಲ್ಲಿ 48 ಲಕ್ಷ ರೂ.ಹಣ ಕಳೆದುಕೊಂಡಿದ್ದಾರೆ. ಕಳೆದ ವಾರದಲ್ಲೇ ಬ್ಯಾಂಕ್ ಪ್ರತಿನಿಧಿಯೊಬ್ಬರು 1.60 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ. ಸಾಕಷ್ಟು ಜನರು ಸೈಬರ್ ಕ್ರೈಂಗೆ ವಂಚನೆಯ ಕುರಿತು ಮಾಹಿತಿ ನೀಡುತ್ತಾರೆ. ಆದರೆ ಕೆಲವರು ಭಯದಲ್ಲಿ ಮಾಹಿತಿ ನೀಡದೇ ಲಕ್ಷಾಂತರ ರೂ. ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೆನ್ ಪೊಲೀಸರು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಹಣ ಕಳೆದುಕೊಂಡವರಿಗೆ ವಾಪಾಸ್:
ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ ಘಟಕದ ಪೊಲೀಸರು ವಂಚನೆಗೆ ಒಳಗಾದವರಿಗೆ ಹಣ ವಾಪಾಸ್ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 2018 ರಲ್ಲಿ ದಾಖಲಾಗಿರುವ 3 ಕೇಸ್ ಗಳಲ್ಲಿ ಒಬ್ಬರಿಗೆ ಹಣ ವಾಪಸ್ ಮಾಡಿದ್ದು, ಒಂದು ಕೇಸ್ ನ್ಯಾಯಾಲಯದ ಹಂತದಲ್ಲಿದೆ. 2019 ರಲ್ಲಿ ದಾಖಲಾದ 21 ಪ್ರಕರಣಗಳಲ್ಲಿ 3 ರಲ್ಲಿ ಹಣ ಹಿಂದಿರುಗಿದೆ. 2020 ರಲ್ಲಿ ದಾಖಲಾದ 8 ಕೇಸ್ ಗಳಲ್ಲಿ 4 ರಲ್ಲಿ ಕಳೆದುಕೊಂಡಿರುವ ಹಣ ದೊರಕಿದೆ. 2021 ರಲ್ಲಿ ದಾಖಲಾದ 7 ಪ್ರಕರಣಗಳಲ್ಲಿ 4 ರಲ್ಲಿ ಹಣ ದೊರಕಿದ್ದು, 2 ಕೇಸ್ ನ್ಯಾಯಾಲಯದ ಹಂತದಲ್ಲಿದೆ. 2022 ರಲ್ಲಿ ದಾಖಲಾದ 13 ಪ್ರಕರಣಗಳಲ್ಲಿ 8 ಪ್ರಕರಣಗಳನ್ನು ಭೇದಿಸಲಾಗಿದೆ. 2023 ರಲ್ಲಿ ದಾಖಲಾದ 24 ಪ್ರಕರಣಗಳಲ್ಲಿ 18 ಪ್ರಕಣಗಳಲ್ಲಿ ಕಳೆದುಕೊಂಡವರಿಗೆ ಹಣ ಹಿಂದಿರುಗಿಸಲಾಗಿದೆ. ಈ ಮೂಲಕ ಸೈಬರ್ ವಂಚಕರು ವಂಚನೆಗೆ ಹೊಸ ಮಾರ್ಗಗಳನ್ನು ಅನುರಿಸುತ್ತಿದ್ದರೇ, ಪೊಲೀಸರು ಕೂಡ ಪ್ರಕರಣಗಳನ್ನು ಪತ್ತೆಹಚ್ಚಿ ವಂಚನೆಗೊಳಗಾದವರ ನೆರವಿಗೆ ಧಾವಿಸುತ್ತಿದ್ದಾರೆ.

ನೆರವಾಗುತ್ತಿದೆ ಸಹಾಯವಾಣಿ:
ಸೈಬರ್ ವಂಚನೆಗೆ ಒಳಗಾಗುತ್ತಿರುವವರಿಗೆ ಸೈಬರ್ ಅಪರಾಧ ಸಹಾಯವಾಣಿ 1930 ನೆರವಿಗೆ ಬರುತ್ತಿದೆ. ಇಂತಹ ಯಾವುದೇ ಸೈಬರ್ ಅಪರಾಧಗಳು ಸಂಭವಿಸಿದಾಗ ಈ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. ಇತ್ತೀಚೆಗೆ ಪ್ರತಿ ಪೊಲೀಸ್ ಠಾಣೆಗಳಲ್ಲೂ ಸೈಬರ್ ವಂಚನೆಗೆ ಸಂಬಂಧಿಸಿದಂತೆ ದೂರು ತೆಗೆದುಕೊಳ್ಳಬೇಕು ಎಂದು ಡಿಜಿಪಿ ಅವರು ಆದೇಶ ನೀಡಿದ್ದು, ವಂಚನೆಗೆ ಒಳಗಾದವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ. ದೊಡ್ಡ ಮಟ್ಟದಲ್ಲಿ ಹಣ ವಂಚನೆಯಾಗಿದ್ದು, ಇದನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದರೆ ಪೊಲೀಸ್ ವರಿಷ್ಠಾಧಿಕಾರಿಗಳ ಸಲಹೆಯಂತೆ ಸೆನ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮೊಬೈಲ್ ಬಳಸುವಾಗ ಜಾಗೃತಿ ವಹಿಸಬೇಕಾಗಿದ್ದು, ಇಂತಹ ವಂಚನೆಗಳಿಗೆ ಆಸ್ಪದ ನೀಡಬಾರದು. ಒಂದು ವೇಳೆ ಇಂತಹ ವಂಚನೆಗಳು ನಡೆದರೆ ಸೈಬರ್ ಅಪರಾಧ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ ಎಂದು ಸೆನ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸಾಗರ್ ಮಾಹಿತಿ ನೀಡಿದರು.