ಚಾಮರಾಜನಗರ: ಚಾ.ನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತವಾಗುತ್ತಲೇ ಮತದಾನ ಕೇಂದ್ರದ ಹೊರ ವಲಯದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಚಾ.ನಗರ-ಮೈಸೂರು ಹೆದ್ದಾರಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ಹಾಗೂ ಇನ್ನಿತರೆ ಕಡೆಗಳಿಂದ ಆಗಮಿಸಿದ್ದ ಗಾಂಗ್ರೆಸ್ ಕಾರ್ಯಕರ್ತರು ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು, ಕಾಂಗ್ರೆಸ್ ಮುಖಂಡ ಸುನೀಲ್‌ಬೋಸ್ ಪರವಾಗಿ ೋಷಣೆಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಶಾಲು ಮತ್ತು ಬಾವುಟಗಳನ್ನು ಹಿಡಿದು ಗೆಲುವಿನ ಚಿಹ್ನೆ ಪ್ರದರ್ಶಿಸಿ ಸಂಭ್ರಮ ವ್ಯಕ್ತಪಡಿಸಿದರು.
ಮತದಾನ ಕೇಂದ್ರದತ್ತ ಆಗಮಿಸಿದ ಸುನೀಲ್ ಬೋಸ್ ಅವರ ಕಾರನ್ನು ಹೆದ್ದಾರಿಯಲ್ಲೇ ಅಡ್ಡಗಟ್ಟಿದ ಕಾರ್ಯಕರ್ತರು ಹಾರ-ತುರಾಯಿಗಳನ್ನು ಹಾಕಿ, ಜೈಕಾರ ಕೂಗಿ ಸಂಭ್ರಮಿಸಿದರು. ಕಾರಿನಿಂದ ಕೆಳಗೆ ಇಳಿದ ಸುನೀಲ್‌ಬೋಸ್ ಕಾರ್ಯಕರ್ತರಿಗೆ ಕೈಬೀಸಿ ಗೆಲುವಿನ ಚಿಹ್ನೆ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಚಾ.ನಗರ-ಮೈಸೂರು ಮುಖ್ಯರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪೋಲಿಸರು ಮಧ್ಯಪ್ರವೇಶಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮತದಾನ ಕೇಂದ್ರದ ಹೊರಭಾಗದಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಕುಡಿಯುವ ನೀರು, ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.