ಜಿಲ್ಲೆ

ಸಿಎಂಗೆ ಟ್ವೀಟ್ ಮೂಲಕ ಮನವಿ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ನುಗ್ಗುತ್ತಿರುವ ಮಳೆನೀರನ್ನು ತಡೆಗಟ್ಟುವಂತೆ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ.

ಪ್ರತಿ ಬಾರಿ ಮಳೆ ಬಿದ್ದಾಗಲೂ ಪಟ್ಟಣದ ಬಸ್ ನಿಲ್ದಾಣಕ್ಕೆ ನುಗ್ಗುವ ನೀರು ಮಂಡಿಯುದ್ದಕ್ಕೆ ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಒಂದು ಕಿಲೋ ಮೀಟರ್‌ಗೂ ಹೆಚ್ಚಿನ ದೂರಕ್ಕೆ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಆಗುತ್ತಿದೆ. ಆದ್ದರಿಂದ ತುರ್ತಾಗಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ಯಡವನಹಳ್ಳಿ ಗ್ರಾಮದ ಮಲ್ಲೇಶ್ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಈ ಟ್ವೀಟರ್ ದೂರಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅವರ ಕಚೇರಿಯ ಅಧಿಕಾರಿಗಳು ಈ ದೂರನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ. ಇದರಿಂದ ಪಟ್ಟಣಕ್ಕೆ ಯಾವಾಗಲೇ ಮಳೆ ಬಿದ್ದರೂ ಭಾರಿ ಪ್ರಮಾಣದ ನೀರು ನುಗ್ಗುವುದರಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹೊರ ಹೋಗಲು ಪ್ರಯಾಸಪಡುತ್ತಿದ್ದಾರೆ. ಇಲ್ಲಿಗೆ ಬರುವ ನೀರನ್ನು ಬೇರೆಡೆ ಹರಿಯುವಂತೆ ಮಾಡಲು ಪುರಸಭೆ, ಲೋಕೋಪಯೋಗಿ ಹಾಗೂ ಹೆದ್ದಾರಿ ಸಾರಿಗೆ ಪ್ರಾಧಿಕಾರಗಳು ನಾನಾ ಕಸರತ್ತು ಮಾಡುತ್ತಿದ್ದರೂ ಮಳೆ ನೀರು ನಿಲ್ದಾಣಕ್ಕೆ ಬರುವುದನ್ನು ತಪ್ಪಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಟ್ವೀಟರ್ ಮೂಲಕ ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.