ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ(ಮೀಸಲು) ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್‌ಗೆ ಭರ್ಜರಿ ಗೆಲುವಿನ ಡೋಸ್ ಕೊಟ್ಟಿದ್ದಾರೆ. ಇದು ಕ್ಷೇತ್ರದ ಪಾಲಿಗೆ ಇತಿಹಾಸ ನಿರ್ಮಾಣ ಮಾಡಿರುವ ಜಯವಾಗಿದೆ.
ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ಲೋಕಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಅತ್ಯಧಿಕ ಮತಗಳ ಅಂತರದಿಂದ ಸುನೀಲ್‌ಬೋಸ್ ಗೆದ್ದಿದ್ದಾರೆ. ಸುನೀಲ್ ಬೋಸ್‌ಗೆ 7,51,671 ಮತ್ತು ಎಸ್.ಬಾಲರಾಜ್‌ಗೆ 5,62965 ಮತಗಳು ಲಭಿಸಿವೆ. ಈ ಮೂಲಕ ಬೋಸ್ 1,88,706 ಅಂತರದ ಗೆಲುವನ್ನು ಸಾಧಿಸಿದ್ದಾರೆ.
1989ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ವಿ.ಶ್ರೀನಿವಾಸಪ್ರಸಾದ್‌ಗೆ 3,66,922 ಮತಗಳು ಮತ್ತು ಜನತಾದಳ ಅಭ್ಯರ್ಥಿ ದೇವನೂರು ಶಿವಮಲ್ಲುಗೆ 2,13,277 ಮತಗಳು ಸಿಕ್ಕಿದ್ದವು. ವಿ.ಶ್ರೀನಿವಾಸಪ್ರಸಾದ್ 1,53,645 ಮತಗಳ ಅಂತರದಿಂದ ಗೆದ್ದಿದ್ದರು.
2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ 5,67,782 ಮತಗಳನ್ನು ಗಳಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಹುರಿಯಾಳು ಎ.ಆರ್.ಕೃಷ್ಣಮೂರ್ತಿ 4,26,600 ಮತಗಳನ್ನು ಪಡೆದುಕೊಂಡಿದ್ದರು. 1,41,182 ಮತಗಳ ಅಂತರದಿಂದ ಆರ್.ಧ್ರುವನಾರಾಯಣ್ ಗೆದ್ದಿದ್ದರು. ಈ ಇಬ್ಬರು ನಾಯಕರನ್ನು ಬಿಟ್ಟರೆ ಅತ್ಯಧಿಕ ಮತಗಳ ಅಂತರದ ಗೆಲುವು ಸಾಧಿಸಿರುವುದು ಸುನೀಲ್ ಬೋಸ್ ಮಾತ್ರ.