ಚಾಮರಾಜನಗರ : ಸ್ಥಳೀಯ ಆಡಳಿತ ಸೂಕ್ತ ರೀತಿಯಲ್ಲಿ ಕಸವಿಲೇವಾರಿ ಮಾಡದೇ, ಚರಂಡಿ ಸ್ವಚ್ಛಗೊಳಿಸದೇ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ನಿಂತು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ಪುರಸಭೆ, ಹನೂರು ಮತ್ತು ಯಳಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಎಲ್ಲೆಂದರಲ್ಲಿ ಕಸ ಸಂಗ್ರಹವಾಗಿದ್ದು, ಸ್ಥಳೀಯ ಆಡಳಿತ ಸೂಕ್ತ ಕಸ ವಿಲೇವಾರಿ ಮಾಡುವಲ್ಲಿ ಕ್ರಮವಹಿಸುತ್ತಿಲ್ಲ. ರಸ್ತೆಯ ಬದಿ ಹಾಗೂ ಚರಂಡಿಗಳಲ್ಲಿ ಕಸ ಸಂಗ್ರವಾಗಿದ್ದು, ಕೊಳೆತು ನಾರುತ್ತಿದೆ.
ಪರಿಣಾಮವಾಗಿ ಎಲ್ಲೆಂದರಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ವಿವಿಧ ಬಡಾವಣೆಗಳ ವೃತ್ತಗಳು, ಬಸ್ ನಿಲ್ದಾಣ, ಕಾಲುವೆಗಳಲ್ಲಿ ಕಸದ ರಾಶಿ ಸಂಗ್ರಹವಾಗಿದ್ದು ಸಾರ್ವಜನಿಕರು ನಿತ್ಯವೂ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಹಸಿಕಸ-ಒಣಕಸ ವಿಂಗಡಣೆ ಸಮರ್ಪಕವಾಗಿ ಆಗದೇ ಅನೈರ್ಮಲ್ಯ ತಾಂಡವವಾಡುತ್ತಿದೆ. ಸತತ ಮಳೆಯಿಂದಾಗಿ ಹಳ್ಳ-ಕೊಳ್ಳಗಳಲ್ಲಿ ನೀರು ಸಂಗ್ರಹವಾಗಿದ್ದು, ಮಳೆನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಆಗಾಗಿ ಸಂಬಂಧ ಪಟ್ಟ ಸ್ಥಳೀಯ ಆಡಳಿತ ಹಾಗೂ ಆರೋಗ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕ್ರಮಕೈಗೊಂಡು, ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ ಸಾರ್ವಜನಿಕರಲ್ಲಿ ಇರುವ ಆತಂಕವನ್ನು ದೂರಮಾಡಬೇಕಿದೆ.