ಜಿಲ್ಲೆ

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ನೇಣಿಗೆ ಶರಣು

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬಳು ಶನಿವಾರ ನೇಣಿಗೆ ಕೊರಳೊಡಿದ್ದು, ಈ ಸಂಬಂಧ ಪೊಲೀಸರು ಮೃತಳ ಪತಿಯನ್ನು ಬಂಧಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಬಿಸಲವಾಡಿ ನಿವಾಸಿ ಕವಿತಾ (37)ಮೃತೆ. ಈಕೆಯ ಗಂಡ ಚೇತನ್ ಬಂಧನಕ್ಕೊಳಗಾದವನು. ಉಳಿದ ಆರೋಪಿಗಳಾದ ಅತ್ತೆ ಸಿದ್ದಜಮ್ಮ, ಮಾವ ಸೋಮಯ್ಯ, ಕೃಷ್ಣಮೂರ್ತಿ, ಚೇತನ್, ಭುವನ ರಾಘವೇಂದ್ರ ತಲೆ ಮರೆಸಿಕೊಂಡಿದ್ದಾರೆ.

ಘಟನೆ ವಿವರ: ಕವಿತಾಳಿಗೆ ಬಿಸಲವಾಡಿಯ ಸೋಮಯ್ಯ ಅವರ ಪುತ್ರ ಚೇತನ್ ಎಂಬುವನ ಜತೆ 2022ರ ನ.30ರಂದು ವಿವಾಹವಾಗಿತ್ತು. ಕವಿತಾಳ ಮನೆಯವರು ವರದಕ್ಷಿಣೆಯಾಗಿ 1.25 ಲಕ್ಷ ಮೌಲ್ಯದ ಸೂಟು ಬೂಟು ಹಾಗೂ 1 ವಾಚ್ ಹಾಗೂ ಚಿನ್ನದ ಉಂಗುರವನ್ನು ನೀಡಿದ್ದರು. ಬ್ರೇಸ್‌ಲೈಟ್‌ಅನ್ನು ಮದುವೆ ಬಳಿಕ ಕೊಡುವುದಾಗಿ ತಿಳಿಸಿದ್ದರು. ಆದರೆ, ಕೊಡಲು ಸಾಧ್ಯವಾಗಿರಲಿಲ್ಲ. ಮದುವೆ ಆದ 1 ತಿಂಗಳ ಬಳಿಕ ಕವಿತಾಳಿಗೆ 20 ಗ್ರಾಂ. ಬ್ರೇಸ್‌ಲೈಟ್ ಜತೆ 2 ಲಕ್ಷ ರೂ. ಅನ್ನು ತವರು ಮನೆಯವರಿಂದ ತರಿಸಿಕೊಡುವಂತೆ ಗಂಡ ಚೇತನ್ ಒತ್ತಾಯ ಮಾಡುತ್ತಿದ್ದ. ಜತೆಗೆ ಅತ್ತೆ ಸಿದ್ದಜಮ್ಮ, ಮಾವ ಸೋಮಯ್ಯ ಹಾಗೂ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಗೆ ನೀಡಿದಾಗ ಚೇತನ್ ಕುಟುಂಬ ಕರೆಯಿಸಿ ಬುದ್ಧಿವಾದ ಹೇಳಿದ್ದರು. ಮುಂದೆಯೂ ಗಂಡನ ಮನೆಯವರಿಂದ ಕಿರುಕುಳ ಅನುಭವಿಸುತ್ತಿದ್ದರಿಂದ ಕಳೆದ ಮೇ17ರಂದು ಸಾಂತ್ವನ ಕೇಂದ್ರದಲ್ಲಿ ಕವಿತಾ ಉಳಿದುಕೊಂಡಿದ್ದಳು. ಬಳಿಕ ಮೇ 20 ರಂದು ಕೊಳ್ಳೇಗಾಲ ಪಟ್ಟಣದ ಟಿಸಿ ಹುಂಡಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಕವಿತಾ ಉಳಿದು ಕೊಂಡಿದ್ದಳು. ಈ ವೇಳೆ ಮನೆಯವರಿಗೆ ಚೇತನ್ ಹಾಗೂ ಕುಟುಂಬ ತನಗೆ ಕಿರುಕುಳ ನೀಡುವ ಬಗ್ಗೆ ವಿವರಿಸಿ ನಾನು ಸಾಯುತ್ತೇನೆಂದು ಹೇಳುತ್ತಿದ್ದಳು. ದುರದೃಷ್ಟವಶಾತ್ ಮೇ 31 ರಂದು ಮನೆಯ ಛಾವಣಿಗೆ ನೇಣು ಹಾಕಿಕೊಂಡಿದ್ದಾಳೆ. ಈ ಬಗ್ಗೆ ಮೃತಳ ಸಹೋದರ ಚೆಲುವರಾಜು ಪೊಲೀಸರಿಗೆ ದೂರು ನೀಡಿದ್ದಾರೆ.