ಚಾಮರಾಜನಗರ: ಪಂಚೇಂದ್ರಿಯಗಳಲ್ಲಿ ಕಣ್ಣಿಗೆ ಹೆಚ್ಚಿನ ಮಹತ್ವವಿದ್ದು, 40 ವರ್ಷದ ಬಳಿಕ ಪ್ರತಿಯೊಬ್ಬರು ಕಣ್ಣಿನ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತ ಜೀವನ ನಡೆಸಲು ಮುಂದಾಗಬೇಕು ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಚಂದ್ರ ಪ್ರಭ ಜೈನ್ ತಿಳಿಸಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವದಲ್ಲಿ ರೋಟರಿ ಸಂಸ್ಥೆ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಾಸ್ರತ್ರೆಯ ಸಹಯೋಗದಲ್ಲಿ ಭಾನುವಾರ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ, ಮಾತನಾಡಿದರು. ಈವರೆಗೂ ಸಾವಿರಾರು ಮಂದಿ ಕಣ್ಣಿನ ಪೊರೆಯುಳ್ಳುವರು ಶಸ್ತ್ರಚಿಕಿತ್ಸೆ ಮಾಡಿಕೊಂಡು ಮತ್ತೆ ದೃಷ್ಟಿ ಪಡೆದುಕೊಂಡಿದ್ದಾರೆ. ಅನೇಕರು ಕಣ್ಣಿನ ತೊಂದರೆಯಿಂದ ಮುಕ್ತಿಯನ್ನು ಹೊಂದಿದ್ದಾರೆ. ಹೀಗಾಗಿ ಕಣ್ಣಿನ ಆರೋಗ್ಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಒತ್ತಡ ಜೀವನ ಹಾಗೂ ಸದಾ ಕಂಪ್ಯೂಟರ್, ಟವಿ ನೋಡುವುದರಿಂದ ಕಣ್ಣಿನ ತೊಂದರೆ ಕಾಣಿಸಿಕೊಳ್ಳುತ್ತಿವೆ. ಇದನ್ನು ಪ್ರಥಮ ಹಂತದಲ್ಲಿಯೇ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಕನ್ನಡಕ ಹಾಗೂ ಸಲಹೆ ಸೂಚನೆಗಳನ್ನು ಪಡೆದುಕೊಂಡರೆ ಕಣ್ಣಿಗೆ ಅಗುವ ಹಾನಿ ಮತ್ತು ಒತ್ತಡವನ್ನು ತಪ್ಪಿಸಲು ಸಾಧ್ಯವಿದೆ ಎಂದರು.
ಶಿಬಿರದಲ್ಲಿ ಸುಮಾರು 427 ಮಂದಿ ತಪಾಸಣೆಗೆ ಒಳಗಾಗಿದ್ದು, ಕಣ್ಣಿನ ಪೊರೆಯುಳ್ಳ 170 ಮಂದಿಯನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆಮಾಡಿ ಕೊಯಮತ್ತೂರು ಅರವಿಂದ ಕಣ್ಣಾಸ್ಪತ್ರೆಗೆ ಕಳುಹಿಸಿಕೊಡಲು ನಿರ್ಧರಿಸಲಾಯಿತು. ಕೊಯಮತ್ತೂರು ಅರವಿಂದ ಕಣ್ಣಾಸ್ಪತ್ರೆಯ ಸಂಯೋಜಕ ವಿಜಯಕಾಂತ್, ರೋಟರಿ ಕಾರ್ಯದರ್ಶಿ ಅಬ್ದುಲ್ ಅಜೀಜ್ ದೀನಾ, ಹಿರಿಯ ರೋಟರಿಯನ್ ಜಿ.ಆರ್.ಅಶ್ವಥ್‌ನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ, ಎಲ್ ನಾಗರಾಜು, ಕಾಗಲವಾಡಿಚಂದ್ರು, ಅಂಕಶೆಟ್ಟಿ, ವರ್ಗಿಸ್, ಪಿಆರ್‌ಒ ವಿಜಯಕಾಂತ್ ಹಾಗೂ ಇತರರು ಹಾಜರಿದ್ದರು.