ಚಾಮರಾಜನಗರ: ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂ.4ರಂದು ನಡೆಯಲಿದ್ದು, ಎಣಿಕೆ ಕಾರ್ಯಕ್ಕಾಗಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಜೂ.4ರಂದು ನಡೆಯಲಿರುವ ಮತ ಎಣಿಕೆ ಸಂಬಂಧ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಗರದ ನಂಜನಗೂಡು ರಸ್ತೆಯ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂ.4ರಂದು ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮತ ಎಣಿಕೆ ಕೇಂದ್ರಕ್ಕೆ ಐಟಿಬಿಪಿ ತಂಡದಿಂದ ಸೂಕ್ತ ಭದ್ರತೆ ಒದಗಿಸಲಾಗಿದೆ. ಅಗ್ನಿಶಾಮಕ ದಳದ 8 ಸಿಬ್ಬಂದಿಯುಳ್ಳ ಒಂದು ತಂಡ ವಾಹನದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದೆ. ಬಿ ದರ್ಜೆಯ ಒಬ್ಬ ಅಧಿಕಾರಿಯೊಬ್ಬರನ್ನು 8 ಗಂಟೆಗಳ ಅವಧಿಯಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಮತ ಯಂತ್ರಗಳ ಭದ್ರತಾ ಕೊಠಡಿಯನ್ನು ಉಸ್ತುವಾರಿಗಾಗಿ ನೇಮಿಸಲಾಗಿದೆ.
ಪ್ರತಿದಿನ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಒಟ್ಟು 140 ಅಧಿಕಾರಿಗಳನ್ನು ನಿಯೋಜಿಸಿದ್ದು, ನಿಯೋಜಿತ ಬಿ ದರ್ಜೆಯ ಅಧಿಕಾರಿಗಳ ಕರ್ತವ್ಯವನ್ನು ಮೇಲ್ವಿಚಾರಣೆ ಮಾಡಲು 6 ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಮತ ಎಣಿಕೆ ಕೇಂದ್ರದಲ್ಲಿ ಮತ ಯಂತ್ರಗಳ ಭದ್ರತಾ ಕೊಠಡಿಗಳ ಮುಂದೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಸದರಿ ವೀಡಿಯೋ ಚಿತ್ರೀಕರಣವನ್ನು ವೀಕ್ಷಿಸಲು ಎಲ್‌ಇಡಿ ಟಿವಿಯನ್ನು ಹಾಕಿಸಲಾಗಿದೆ. ಸಿಸಿ ಟಿವಿಗಳು ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಲು 6 ಜನ ತಾಂತ್ರಿಕ ಸಿಬ್ಬಂದಿಯನ್ನು 3 ಪಾಳಿಯಲ್ಲಿ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ 100 ಮೀ. ಒಳಗಡೆ ನಿಬರ್ಂಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಯಾವುದೇ ವಾಹನವನ್ನು ಒಳಗಡೆ ಬಿಡುವುದಿಲ್ಲ. ಎಣಿಕೆ ಕಾರ್ಯವನ್ನು ಸುಲಲಿತವಾಗಿ ನಡೆಸುವ ಸಲುವಾಗಿ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ಸ್, ಯುಪಿಎಸ್, ಟೆಲಿಫೋನ್, ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಣಿಕೆ ಕಾರ್ಯವನ್ನು ಶಾಂತಿ ಮತ್ತು ಸುವ್ಯವಸ್ಥೆ ಮತ್ತು ಸುರಕ್ಷಿತವಾಗಿ ನಡೆಸಲು ಅಗತ್ಯ ಬ್ಯಾರಿಕೇಡಿಂಗ್, ಸಿಗ್ನಲ್ಸ್ ಮತ್ತು ವಾಹನ ನಿಲುಗಡೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಇತರರು ಹಾಜರಿದ್ದರು.
14 ಟೇಬಲ್‌ಗಳಲ್ಲಿ ಅಂಚೆಮತ ಎಣಿಕೆ:
ಅಂಚೆ ಮತಪತ್ರಗಳ ಮೂಲಕ ಒಟ್ಟು 4405 ಮತ ಚಲಾವಣೆಯಾಗಿವೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ತಲಾ 14 ಟೇಬಲ್‌ಗಳಲ್ಲಿ ನಡೆಯಲಿದೆ. ಪ್ರತಿ ಟೇಬಲ್‌ಗೆ ತಲಾ 14 ಮಂದಿ ಮತ ಎಣಿಕೆ ಮೇಲ್ವಿಚಾರಕರು, 14 ಮಂದಿ ಎಣಿಕೆ ಸಹಾಯಕರು, 14 ಮಂದಿ ಮೈಕ್ರೋ ಅಬ್ಸರ್‌ವರ್ ಹಾಗೂ ಅಂಚೆ ಮತ ಪತ್ರ ಎಣಿಕೆಗೆ 5 ಮಂದಿ ಸೇರಿ ಒಟ್ಟು 45 ಸಿಬ್ಬಂದಿ ಇರಲಿದ್ದಾರೆ. ಅಂಚೆ ಮತ ಪತ್ರ ಎಣಿಕೆಗೆ 8 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, 8 ಮಂದಿ ಏಜೆಂಟರನ್ನು ನೇಮಕ ಮಾಡಲಾಗಿದೆ. ಎಣಿಕೆಯು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯವರ ಸಮ್ಮುಖದಲ್ಲಿ ನಡೆಯಲಿದೆ. ಎವಿಎಂ ಮತ ಎಣಿಕೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಏಜೆಂಟರಂತೆ ಒಟ್ಟು 120 ಮಂದಿ ಎಣಿಕೆ ಏಜೆಂಟರನ್ನು ನೇಮಕ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್‌ಗಳಂತೆ ಒಟ್ಟು 112 ಮತ ಎಣಿಕೆ ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ.
ಸಮಯಕ್ಕೆ ಸರಿಯಾಗಿ ಹಾಜರಾಗಬೇಕು:
ಏಜೆಂಟರು ಮತ ಎಣಿಕೆ ಕಾರ್ಯಕ್ಕೆ ಹಾಜರಾಗುವಾಗ ನೇಮಕಾತಿ ಪತ್ರದ ಜತೆಗೆ ತಮ್ಮ ಗುರುತಿನ ಚೀಟಿಯನ್ನು ಮತಗಳ ಎಣಿಕೆಗಾಗಿ ನಿಗದಿಪಡಿಸಿರುವ ಸಮಯದ ಒಂದು ಗಂಟೆ ಮುಂಚಿತವಾಗಿ ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಸಮಯಕ್ಕೆ ಮೀರಿ ಸಲ್ಲಿಸಲ್ಪಟ್ಟ ಯಾವುದೇ ನೇಮಕಾತಿ ಪತ್ರಗಳನ್ನು ಅಂಗೀಕರಿಸಲಾಗುವುದಿಲ್ಲ. ಮತ ಎಣಿಕೆ ಏಜೆಂಟರಿಗೆ ಎಣಿಕೆ ಕೇಂದ್ರದೊಳಗೆ ಮೊಬೈಲ್, ಐಫೋನ್, ಲ್ಯಾಪ್ ಟಾಪ್ ಅಥವಾ ಅಥವಾ ವಿಡಿಯೋ (ಶ್ರವ್ಯ-ದೃಶ್ಯ) ಚಿತ್ರೀಕರಣ ಮಾಡಿ ದಾಖಲಿಸುವಂತಹ ಯಾವುದೇ ವಿದ್ಯುನ್ಮಾನ ಸಾಧನ ತರುವುದನ್ನು ನಿಷೇಧಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರ‌್ಯಾಂಡಂ ಆಗಿ ಆಯ್ಕೆ ಮಾಡಿದ 5 ಮತಗಟ್ಟೆಗಳ ವಿವಿ ಪ್ಯಾಟ್ ಪೇಪರ್ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುತ್ತದೆ. ಎಣಿಕೆ ಕಾರ್ಯ ನಡೆಸಲಾಗುವ 8 ವಿಧಾನಸಭಾ ಕ್ಷೇತ್ರಗಳ ಕೊಠಡಿಗಳಲ್ಲಿ ವೆಬ್ ಕಾಸ್ಟಿಂಗ್ ಕಾರ್ಯ ನಡೆಸಲಾಗುತ್ತದೆ. ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯವಾದ ಟಿ.ವಿ, ಇಂಟರ್ ನೆಟ್ ಸೇರಿದಂತೆ ಅಗತ್ಯ ತಾಂತ್ರಿಕ ವ್ಯವಸ್ಥೆ ಕಲ್ಪಿಸಲಾಗಿದೆ.
ಲೋಕಸಭಾ ಚುನಾವಣಾ ಮತ ಎಣಿಕೆಗೆ ಯಾವುದೇ ರೀತಿಯಲ್ಲೂ ಗೊಂದಲಗಳು ಉಂಟಾಗದಂತೆ ಮತ್ತು ಸ್ಟ್ರಾಂಗ್ ರೂಂ ಭದ್ರತೆಗಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಕಾರ್ಯಕ್ಕಾಗಿ ಕೆ.ಎಸ್.ಆರ್.ಪಿ ಹಾಗೂ ಮೀಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ. 80 ಅಧಿಕಾರಿಗಳು, 300 ಸಿಬ್ಬಂದಿ ಹಾಗೂ 350 ಮಂದಿ ಗೃಹರಕ್ಷಕ ದಳ ಸಿಬ್ಬಂದಿಯನ್ನು ನೀಯೋಜಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
ಪದ್ಮಿನಿ ಸಾಹು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ