ಜಿಲ್ಲೆ

ನಿವೃತ್ತ ಎಸಿಎಫ್ ಅಂಕರಾಜು ಬೀಳ್ಕೊಡುಗೆ

ಹನೂರು: ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ದಕ್ಷ ಅಧಿಕಾರಿ, ಕಾವೇರಿ ವನ್ಯಜೀವಿ ವಿಭಾಗದ ಎಸಿಎಫ್ ಎನ್.ಎಂ. ಅಂಕರಾಜು ಅವರು ನಿವೃತ್ತಿ ಹೊಂದಿದ್ದು, ಗುರುವಾರ ಗೋಪಿನಾಥಂ ಸಮೀಪದ ಯರಿಕೆಯಂನಲ್ಲಿ ಬೀಳ್ಕೋಡುಗೆ ಸಮಾರಂಭ ನಡೆಯಿತು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಅಂಕರಾಜು ಅವರು 1987 ರಲ್ಲಿ ಅರಣ್ಯ ಇಲಾಖೆಯ ಸೇವೆಗೆ ಸೇರಿದರು. ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೇವೆ ಆರಂಭಿಸಿದ ಇವರು ಈ ವೇಳೆಯಲ್ಲಿ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ವೀರಪ್ಪನ್‌ನಿಂದ ಹತ್ಯೆಯಾದ ಡಿಸಿಎಫ್ ಅವರೊಂದಿಗೆ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಇವರು ಶಿವಮೊಗ್ಗಕ್ಕೆ ವರ್ಗಾವಣೆಗೊಂಡರು. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಮಲೆನಾಡು ಅರಣ್ಯ ಪ್ರದೇಶದಲ್ಲಿ ಸುಮಾರು 20 ವರ್ಷಗಳ ಕಾಲ ಆರ್‌ಎಫ್‌ಒ ಆಗಿ ಕರ್ತವ್ಯ ನಿರ್ವಹಿಸಿದ್ದರು. 2013ರಲ್ಲಿ ಎಸಿಎಫ್ ಆಗಿ ಬಡ್ತಿ ಹೊಂದಿ ಕಾವೇರಿ ವನ್ಯಜೀವಿ ವಿಭಾಗದಲ್ಲಿ 8 ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗಿದ್ದಾರೆ.

ಅರಣ್ಯ ಇಲಾಖೆಯಿಂದ ಗುರುವಾರ ಯರಿಕೆಯಂನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಆರ್‌ಎಫ್‌ಒಗಳಾದ ಲೋಕೇಶ್, ನಿರಂಜನ್, ಸಂಪತ್ ಪಾಟೀಲ್, ಸುಂದರ್ ಹಾಗೂ ಅರಣ್ಯ ಇಲಾಖೆಯ ನೌಕರರು, ಗ್ರಾಮಸ್ಥರು ಇದ್ದರು.