ಜಿಲ್ಲೆ

ಶಾಲೆಗೆ ಬಂದ ಚಿಣ್ಣರಿಗೆ ಸಂಭ್ರಮದ ಸ್ವಾಗತ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ಬೇಸಿಗೆ ರಜೆ ಮುಗಿಸಿ ಶಾಲೆಗಳತ್ತ ಹೆಜ್ಜೆ ಹಾಕಿದ ಮಕ್ಕಳನ್ನು ಶಿಕ್ಷಣ ಇಲಾಖೆ ಬಹಳ ಸಂಭ್ರಮದಿಂದ ಬರಮಾಡಿಕೊಂಡಿದ್ದು, ಎಲ್ಲ ಶಾಲೆಗಳಲ್ಲಿ ಎಂದಿನಂತೆ ಮಕ್ಕಳ ಕಲರವ ಕೇಳಿಬಂದಿತು.

2024-25ನೇ ಸಾಲನ್ನು ಶೈಕ್ಷಣಿಕ ಬಲವರ್ಧನೆ ವರ್ಷ ಎಂದು ೋಷಣೆ ಮಾಡಿರುವ ಶಿಕ್ಷಣ ಇಲಾಖೆ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಮತ್ತು ಹನೂರು ತಾಲೂಕಿನ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲೂ ಶುಕ್ರವಾರ ಶಾಲಾ ಪ್ರಾರಂಭೋತ್ಸವವನ್ನು ಬಹಳ ಅದ್ದೂರಿಯಾಗಿ ಹಮ್ಮಿಕೊಂಡಿತ್ತು.

ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಮಾವಿನ ತೋರಣ ಮತ್ತು ರಂಗೋಲಿಯಿಂದ ಶಾಲಾ ಆವರಣವನ್ನು ಸಿಂಗರಿಸಲಾಗಿತ್ತು. ಶಿಕ್ಷಕರು ಗುಲಾಬಿ ಹೂ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಕೆಲವು ಗ್ರಾಮಗಳಲ್ಲಿ ಮಕ್ಕಳನ್ನು ಎತ್ತಿನಗಾಡಿಯಲ್ಲಿ ಶಾಲೆಗೆ ಕರೆತರುವ ಮೂಲಕ ಭವ್ಯವಾಗಿ ಸ್ವಾಗತ ಕೋರಲಾಯಿತು. ಈ ವೇಳೆ ವಿದ್ಯಾರ್ಥಿಗಳಿಗೆ ಸಮವಸ, ಪಠ್ಯಪುಸ್ತಕಗಳನ್ನು ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ಹಲವು ಗ್ರಾಮಗಳಲ್ಲಿ ವಿದ್ಯಾರ್ಥಿಗಳು ದಾಖಲಾತಿ ಆಂದೋಲನ ಜಾಥಾ ನಡೆಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಹಾಡಿ-ಕುಣಿದು ಸಂಭ್ರಮಿಸಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ:
ಪ್ರಸ್ತುತ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು, ಶೀಕ್ಷಕರು ಮಗುವನ್ನು ಅರಿತು ಪಾಠ ಮಾಡಿದರೆ ಗುಣಮಟ್ಟದ ಫಲಿತಾಂಶ ಸಾಧ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರ ರಾಜೇಅರಸ್ ಹೇಳಿದರು.
ತಾಲೂಕಿನ ಚಂದಕವಾಡಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಇ-ಕಲಿಕಾ ಕೇಂದ್ರ ಉದ್ಘಾಟನೆ, ಶಾಲಾ ಪ್ರಾರಂಭೋತ್ಸವ ಮತ್ತು ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಚಂದಕವಾಡಿ ಶಾಲೆ ದೊಡ್ಡ ಶಾಲೆಯಾಗಿದೆ, ಇಲ್ಲಿ ಹಿಂದುಳಿದ ಮತ್ತು ಬಡವರ್ಗದ ಮಕ್ಕಳು ಹೆಚ್ಚಾಗಿ ಬರುತ್ತಾರೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಇರುವ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಲಾಗುವುದು. ಸರ್ಕಾರ ಆರಂಭದಲ್ಲೇ ಯಾವುದೇ ಕೊರತೆಯಾಗದಂತೆ ಸಮವಸ್ತ್ರ, ಪಠ್ಯಪುಸ್ತಕ, ಶೂ, ಬಿಸಿಯೂಟ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಚ್.ಎನ್.ಸ್ವಾಮಿ, ಉಪ ಪ್ರಾಂಶುಪಾಲ ಚಂದ್ರಶೇಖರ್, ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಮಸ್ವಾಮಿ, ಬಿಆರ್‌ಸಿ ಮಹದೇವಯ್ಯ, ರಮೇಶ್, ಸಿಆರ್‌ಪಿ ಬಸವಣ್ಣ, ಸುಬ್ರಹ್ಮಣ್ಯ, ಶಿವರಾಜು, ಎಂ.ಬಸವರಾಜು, ಮಹದೇವಸ್ವಾಮಿ, ಶಿವಣ್ಣ, ಬಸವರಾಜು, ನಾಗರಾಜು ಹಾಗೂ ಇತರರು ಹಾಜರಿದ್ದರು.

ಸಿದ್ದಯ್ಯನಪುರದಲ್ಲಿ ನೋಟ್‌ಬುಕ್, ಬ್ಯಾಗ್ ವಿತರಣೆ:
ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ದಾನಿಗಳಿಂದ ಉಚಿತ ನೋಟ್‌ಬುಕ್ ಮತ್ತು ಬ್ಯಾಗ್‌ಗಳನ್ನು ವಿತರಣೆ ಮಾಡಲಾಯಿತು. ಇದಕ್ಕೂ ಮುನ್ನ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಹೊಸ ಬಟ್ಟೆಗಳನ್ನು ಧರಿಸಿದ್ದ ಪುಟಾಣಿ ಮಕ್ಕಳನ್ನು ಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು.
ಬಳಿಕ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಗುಲಾಬಿಯನ್ನು ನೀಡಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು. ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಯಜಮಾನರು ಹಾಗೂ ಶಿಕ್ಷಕ ವರ್ಗದವರು ಹಾಜರಿದ್ದರು.

ಕನ್ನಡ ಶಲ್ಯಗಳೊಂದಿಗೆ ಮಕ್ಕಳಿಗೆ ಸ್ವಾಗತ:
ತಾಲೂಕಿನ ಕರಡಿಮೋಳೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಹಣತೆಯೊಡನೆ ಕನ್ನಡ ಶಲ್ಯದೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು. ಬಳಿಕ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಲಾ ದಾಖಲಾತಿ ಆಂದೋಲನ ಜಾಗೃತಿ ನಡೆಸಿದರು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ಅಂಕೇಶ್, ಸದಸ್ಯರಾದ ಸುಮಿತ್ರಾ, ಚೈತ್ರಾ, ಮಂಜುಳಾ, ರಕ್ಷಿತಾ, ಮುಖ್ಯ ಶಿಕ್ಷಕಿ ಬಿ.ಎಸ್.ಲತಾ, ಸಹಶಿಕ್ಷಕ ಸೋಮಣ್ಣ ಹಾಗೂ ಇತರರಿದ್ದರು.

ಎತ್ತಿನ ಗಾಡಿ, ಆಟೋಗಳಲ್ಲಿ ಮೆರವಣಿಗೆ:
ತಾಲೂಕಿನ ಉಡಿಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಅಂಗವಾಗಿ ವಿದ್ಯಾರ್ಥಿಗಳನ್ನು ಎತ್ತಿನ ಗಾಡಿ, ಹಾಗೂ ಆಟೋಗಳಲ್ಲಿ ಮೆರವಣಿಗೆ ಮಾಡಿ, ಶಾಲೆಗೆ ಕರೆತರುವ ಮೂಲಕ ಗುಲಾಬಿ ಹೂ, ಸಿಹಿ ನೀಡಿ ಸ್ವಾಗತಿಸಲಾಯಿತು.
ಈ ವೇಳೆ ಶಾಲೆಯ ಎಲ್ಲ ಕೊಠಡಿಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಣ್ಣದ ರಂಗೋಲಿಯಿಂದ ಸಿಂಗರಿಸಿ, ಬಾಳೆ ಕಂದು, ಮಾವಿನ ತೋರಣ ಕಟ್ಟಿ ಹಬ್ಬದ ಮಾದರಿಯಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಸಂಪನ್ಮೂಲ ಸಮನ್ವಯಾಧಿಕಾರಿ ರಾಜೀವ್, ಎಸ್‌ಡಿಎಂಸಿ ಅಧ್ಯಕ್ಷ ದೇವಣ್ಣ, ಮಹದೇವಸ್ವಾಮಿ, ಬಸವಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ, ಶಾಲೆಯ ಮುಖ್ಯ ಶಿಕ್ಷಕ ಎಂ.ಡಿ.ಮಹದೇವಯ್ಯ, ದೊರೆಸ್ವಾಮಿ, ಪ್ರಸಾದ್, ಚನ್ನಬಸಣ್ಣ, ರೂಪಾ, ಶಿವಮ್ಮ, ಪದ್ಮಾವತಿ, ಸಿಆರ್‌ಪಿ ಸಂಪತ್‌ಕುಮಾರ್ ಹಾಜರಿದ್ದರು.