ಕೊಳ್ಳೇಗಾಲ : ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ಶುಕ್ರವಾರ ನೀಲಗಾರರ ದೀಕ್ಷೆ ಕೊಡಿಸುವ ವಿಚಾರವಾಗಿ ಎರಡು ಗುಂಪುಗಳು ಪರಸ್ಪರ ಬಡಿದಾಡಿಕೊಂಡಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಒಂದು ಗುಂಪಿನ ಚಿಕ್ಕಲ್ಲೂರು ದೇವಸ್ಥಾನದ ಅರ್ಚಕ ಶಂಕರಪ್ಪ (65) ಕುಮಾರ್ (40) ಮತ್ತೊಂದು ಗುಂಪಿನ ನಂಜುಂಡಸ್ವಾಮಿ(32)ಗಾಯಗೊಂಡವರು.
ಹಲ್ಲೆಗೊಳಗಾದ ಕುಮಾರ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಶುಕ್ರವಾರ ಚಿಕ್ಕಲೂರಿನ ಸಿದ್ದಪ್ಪಾಜಿ ಗದ್ದಿಗೆ ಸಮೀಪವಿರುವ ದೊಡ್ಡಮ್ಮತಾಯಿ ಗದ್ದಿಗೆಗೆ ಶಂಕರಪ್ಪ ಅವರು ಪೂಜೆ ಮಾಡುತ್ತಿದ್ದ ವೇಳೆ ನಂಜುಂಡಸ್ವಾಮಿ ಹಾಗೂ ಆತನ ಸಂಗಡಿಗರಾದ ಸಿದ್ದಪ್ಪ, ಶಿವು, ನಂದೀಶ, ಶಿವನಂಜಪ್ಪ, ರಾಚಪ್ಪ ಏಕಾಏಕಿ ಬಂದು ಅವ್ಯಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ನೀನು ನೀಲಗಾರಿಕೆ ಮಾಡುವುದು ಬೇಡವೆಂದು ನಿಂದಿಸಿದ್ದಾರೆ. ನಂತರ, ಇದನ್ನು ಸ್ಥಳದಲ್ಲಿದ್ದ ಕುಮಾರ್ ಹಾಗೂ ಶಂಕರಪ್ಪ ಪ್ರಶ್ನಿಸಿದಾಗ ಕೋಪಗೊಂಡ ನಂಜುಂಡಸ್ವಾಮಿಯು ಕುಮಾರ್ ಹಾಗೂ ಶಂಕರಪ್ಪನ ಮೇಲೆ ರಾಡಿನಿಂದ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಕುಮಾರ್‌ಹಾಗೂ ಶಂಕರಪ್ಪ ಅವರು ಸಹ ನಂಜುಂಡಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಮೂವರು ಸಹ ಗಾಯಗೊಂಡು ಆಸ್ಪ ತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಸಂಬಂಧ ಹಲ್ಲೆಗೊಳಗಾದ ಕುಮಾರ್ ಅವರು ನಂಜುಂಡಸ್ವಾಮಿ, ನಂದೀಶ್, ಸಿದ್ದಪ್ಪ, ರಾಚಪ್ಪ, ಶಿವು, ಶಿವನಂಜಪ್ಪ ಎಂಬುವರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಆರೋಪಿ ರಾಚಪ್ಪನನ್ನು ಬಂಧಿಸಿದ್ದಾರೆ.
ಈ ಹಿಂದೆಯು ದೇವಸ್ಥಾನದಲ್ಲಿ ಅರ್ಚಕ ಕುಟುಂಬಕ್ಕೆ ಸೇರಿದ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೆ ಯಾರೋ ಕಿಡಿಗೇಡಿಗಳು ದೇವಾಲಯದ ಹುಂಡಿಗೆ ಬೆಂಕಿ ಹಾಕಿದ್ದನ್ನು ಸ್ಮರಿಸಬಹುದು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಹೊಡೆದಾಟ ಪ್ರಕರಣ ಮರುಕಳಿಸಿದೆ.