ಜಿಲ್ಲೆ

ಟಿಕೆಟ್ ವಿಚಾರಕ್ಕೆ ಕಂಡಕ್ಟರ್, ಕಾನ್‌ಸ್ಟೆಬಲ್ ನಡುವೆ ಘರ್ಷಣೆ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ಪಟ್ಟಣದ ಬಸ್ ನಿಲ್ದಾಣದಲ್ಲಿ ಟಿಕೆಟ್ ವಿಚಾರಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ಹಾಗೂ ಬಸ್ ಕಂಡಕ್ಟರ್ ಗುರುವಾರ ಪರಸ್ಪರ ಹೊಡೆದಾಡಿಕೊಂಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುಂಡ್ಲುಪೇಟೆ ಡಿಪೋ ಕಂಡಕ್ಟರ್ ಲೋಕೇಶ್ ಹಾಗೂ ಮೈಸೂರು ಸಶಸ್ತ್ರಮೀಸಲು ಪಡೆ ಕಾನ್‌ಸ್ಟೆಬಲ್ ಕೊಟ್ರೇಶ್ ಪರಸ್ಪರ ಹೊಡೆದಾಡಿಕೊಂಡವರು. ಗುರುವಾರ ಸಂಜೆ ಕೊಟ್ರೇಶ್ ಹಾಗೂ ಕುಟುಂಬದವರು ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಬಸ್ ಮೂಲಕ ವಾಪಸ್ ಆಗುತ್ತಿದ್ದರು. ಕೊಟ್ರೇಶ್ ಚಿಕ್ಕಮ್ಮ ಬಸ್ ಮುಂದಿನ ಸೀಟ್‌ನಲ್ಲಿ ಕುಳಿತಿದ್ದರೆ ಕೊಟ್ರೇಶ್ ಹಿಂದೆ ಇದ್ದರು. ಕೊಟ್ರೇಶ್ ಅವರ ಟಿಕೆಟ್ ಅನ್ನು ಚಿಕ್ಕಮ್ಮ ತಾವೇ ತೆಗೆದುಕೊಂಡಿದ್ದರು. ಈ ವಿಚಾರ ತಿಳಿಯದೇ ಕೊಟ್ರೇಶ್ ಕೂಡ ಟಿಕೆಟ್ ಪಡೆದುಕೊಂಡಿದ್ದಾರೆ. ಬಸ್‌ನಿಂದ ಇಳಿದ ಬಳಿಕ ಎರಡು ಬಾರಿ ಟಿಕೆಟ್ ಪಡೆದ ವಿಚಾರಕ್ಕೆ ಕಂಡಕ್ಟರ್ ಲೋಕೇಶ್ ಹಾಗೂ ಕೊಟ್ರೇಶ್ ನಡುವೆ ಮಾತಿನ ಚಕಮಕಿ ನಡೆದು ಬಳಿಕ, ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.

ಸಿವಿಲ್ ಡ್ರೆಸ್‌ನಲ್ಲಿದ್ದ ಕೊಟ್ರೇಶ್ ಮೇಲೆ ಸಾರಿಗೆ ಸಂಸ್ಥೆಯ ಇತರ ಚಾಲಕರು, ಕಂಡಕ್ಟರ್‌ಗಳು ಕೂಡ ಮೇಲೆ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯ ಬಳಿಕ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಇಬ್ಬರೂ ದೂರು-ಪ್ರತಿ ದೂರು ನೀಡಿದ್ದಾರೆ.