ಜಿಲ್ಲೆ

ಮದ್ಯವರ್ಜನದಿಂದ ನೆಮ್ಮದಿಯ ಜೀವನ

ಕೊಳ್ಳೇಗಾಲ; ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿರುವ ಶ್ರೀ ಶನೈಶ್ಚರ ದೇವಾಲಯದಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆಯ ಸಹಭಾಗಿತ್ವದಲ್ಲಿ ಶನಿಪೂಜೆ ಹಾಗೂ ನವ ಜೀವನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯೆ ಪ್ರೇಮಲತಾ ಕೃಷ್ಣಸ್ವಾಮಿ ಚಾಲನೆ ನೀಡಿ ಮಾತನಾಡಿ, ಮದ್ಯವರ್ಜನ ಶಿಬಿರದಿಂದ ಬಹಳ ಕುಟುಂಬಗಳು ನೆಮ್ಮದಿ ಜೀವನ ನಡೆಸಲು ಅವಕಾಶವಾಗಿದೆ. ಪಾನಮುಕ್ತ ಸದಸ್ಯರು ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಬೇಕು. ಮಕ್ಕಳ ಓದಿಗೆ ಹೆಚ್ಚು ಒತ್ತು ನೀಡಬೇಕು. ಕಷ್ಟಪಟ್ಟು ದುಡಿದ ಹಣವನ್ನು ಸದ್ಬಳಕೆ ಮಾಡಿಕೊಂಡು ಕುಟುಂಬದ ಜತೆ ಸುಖ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.

ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿ ಮಾಧವ ಮಾತನಾಡಿ, ಪ್ರತಿಯೊಬ್ಬರೂ ಮದ್ಯ ವ್ಯಸನ ಚಟದಿಂದ ದೂರ ಉಳಿಯಬೇಕು. ಕುಡಿತದಿಂದ ಕುಟುಂಬ, ಸಮಾಜದ ಸ್ವಾಸ್ಥ್ಯ ಹಾಳಗುತ್ತದೆ. ಈ ಹಿನ್ನೆಲೆ ಮದ್ಯ ಸೇವನೆ ಮಾಡದೆ ನೆಮ್ಮದಿ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

ಮುಖಂಡ ಅಣಗಳ್ಳಿ ಬಸವರಾಜು, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ದಿನರಾಜ್ ಶೆಟ್ಟಿ, ಶಿಬಿರಾಧಿಕಾರಿ ದಿನೇಶ್, ಸಿದ್ದಯ್ಯನಪುರ ವಲಯದ ಮೇಲ್ವಿಚಾರಕರು ಹಾಗೂ ಕೊಳ್ಳೇಗಾಲ ವಲಯದ ಮೇಲ್ವಿಚಾರಕರು ಇದ್ದರು.