ಜಿಲ್ಲೆ

ಗುಣಮಟ್ಟಕ್ಕೆ ಆದ್ಯತೆ ನೀಡಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಜಿಲ್ಲೆಯಲ್ಲಿ ಉತ್ತಮವಾಗಿ ಅರಿಶಿಣ ಬೆಳೆದಿರುವ ರೈತರ ಬಳಿ ಬಿತ್ತನೆ ಅರಿಶಿಣವನ್ನು ಖರೀದಿ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಅರಿಶಿಣದ ಬೆಲೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಹಾಗೂ ಬಿತ್ತನೆ ಅರಿಶಿಣ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಬೇರೆ ಕಡೆಗಳಿಂದ ಬಿತ್ತನೆ ಅರಿಶಿಣ ಖರೀದಿ ಮಾಡುವುದರಿಂದ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ತಾಲೂಕಿನ ಸಂತೇಮರಹಳ್ಳಿ ರೈತ ಮುಖಂಡ ಹೊನ್ನೂರು ಬಸವಣ್ಣ ಹೇಳಿದರು.

ಅರಿಶಿಣ ಬೆಳೆಗೆ ಉತ್ತಮ ಬೆಲೆ ಬಂದಿದ್ದ ಕಾರಣ ಹಲವು ರೈತರು ಅಧಿಕ ಪ್ರಮಾಣದಲ್ಲಿ ಈ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಗುಣಮಟ್ಟ ಪರಿಶೀಲನೆ ಮಾಡದೆ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿ, ರೈತರು ಜಾಗೃತೆ ವಹಿಸಬೇಕೆಂದರು.

ಪ್ರಸ್ತುತ ರೈತ ಉತ್ಪಾದನಾ ಸಂಸ್ಥೆಗಳಿಂದ ಬಿತ್ತನೆ ಅರಿಶಿಣವನ್ನು ವಿತರಣೆ ಮಾಡಲಾಗುತ್ತಿದೆ. ಆ ಗುಣಮಟ್ಟದ ಅರಿಶಿಣವನ್ನು ಖರೀದಿ ಮಾಡುವ ಮೂಲಕ ರೈತರು ಬಿತ್ತನೆ ಮಾಡಬೇಕು. ಜಮೀನಿನ ಮಣ್ಣು, ಗೊಬ್ಬರ ಬಳಕೆಯಲ್ಲೂ ಸಾಕಷ್ಟು ನಿಯಮಗಳನ್ನು ಅನುಸರಿಸಿದರೆ, ಉತ್ತಮ ಇಳುವರಿ ಸಾಧ್ಯವಾಗುತ್ತದೆ ಎಂದರು.