ಜಿಲ್ಲೆ

ಪ್ರತಿ ಗ್ರಾಮಗಳಲ್ಲೂ ಸಹಜ ಕೃಷಿ ಅನುಷ್ಠಾನವಾಗಲಿ

ಯಳಂದೂರು : ಗ್ರಾಮ ಪಂಚಾಯಿತಿಗಳ ಮೂಲಕ ಸಹಜ ಬೇಸಾಯ ಅನುಷ್ಠಾನವಾಗಬೇಕು ಎಂದು ಸಹಜ ಕೃಷಿ ವಿಜ್ಞಾನಿ ಡಾ. ಮಂಜುನಾಥ ತಿಳಿಸಿದರು.

ತಾಲೂಕಿನ ದುಗ್ಗಹಟ್ಟಿ ರಾಜೇಶ ಅವರ ತೋಟದಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಮೇ 28 ರಿಂದ 30 ರವರೆಗೆ ಹಮ್ಮಿಕೊಂಡಿದ್ದ 3 ದಿನಗಳ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಭಾರತ ಕೃಷಿ ಪ್ರಧಾನ ದೇಶವಾಗಿದೆ. ಅನಾದಿಕಾಲದಿಂದ ಮಾನವ ಮತ್ತು ಕೃಷಿಗೆ ಅನ್ಯೋನ್ಯ ಸಂಬಂಧವಿದೆ. ಪರಿಸರ ರಕ್ಷಣೆ ನಮ್ಮ ಹೊಣೆ, ಯಾವತ್ತೂ ಕೃಷಿ ನಮ್ಮನ್ನು ಕೈ ಬಿಟ್ಟಿಲ್ಲ, ಮುಂದೆಯೂ ಬಿಡಿವುದಿಲ್ಲ. ಆದರೆ ನಾವು ಕೃಷಿಯನ್ನು ಕಡೆಗಣಿಸುತ್ತಿರುವುದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.

ಜೆಎಸ್‌ಬಿ ಪ್ರತಿಷ್ಠಾನದ ಎಸ್. ಶಶಿಕುಮಾರ ಮಾತನಾಡಿ, ಕೃಷಿ ಇಲ್ಲದಿದ್ದರೆ ಬದುಕು ಸಾಧ್ಯವಿಲ್ಲ. ಯುವಕರು ಕೃಷಿಗೆ ಒಲವು ತೋರಿಸಬೇಕು. ಇದರಿಂದ ಕೃಷಿಯಿಂದ ವಲಸೆ ಹೋಗುವುದನ್ನು ತಪ್ಪಿಸಬಹುದು. ಸ್ವಾವಲಂಬನೆ ಬದುಕು ಸಾಗಿಸುವುದಕ್ಕೆ ಉಪ ಬೆಳೆಗಳು, ಪರ್ಯಾಯ ಬೆಳೆಗಳ ಬಗ್ಗೆ ಗಮನ ಅಗತ್ಯವಾಗಿದೆ ಎಂದು ತಿಳಿಸಿದರು.

ಇಂದಿನ ಹವಾಮಾನ ಬದಲಾವಣೆಯಿಂದ ಅತಿವೃಷ್ಟಿ, ಅನಾವೃಷ್ಟಿ, ತಾಪಮಾನ ಏರಿಕೆ, ಅಂತರ್ಜಲ ಕುಸಿತ ಇವುಗಳಿಂದ ಕೃಷಿ ಕ್ಷೇತ್ರದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿರುವುದರಿಂದ ಕೃಷಿ ಕ್ಷೇತ್ರವನ್ನು ಸುಸ್ಥಿರವಾಗಿಸಲು ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸಲು ಹಾಗೂ ರೈತರ ಕೃಷಿ ಆದಾಯವನ್ನು ಹೆಚ್ಚಿಸಲು, ವೈಜ್ಞಾನಿಕವಾಗಿ ಕೃಷಿ ಕ್ಷೇತ್ರವನ್ನು ವಿನ್ಯಾಸಗೊಳಿಸುವ ಅನಿವಾರ್ಯತೆಯ ಬಗ್ಗೆ 3 ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.

ರೈತ ಸಂಘದ ಹೂನ್ನೂರು ಪ್ರಕಾಶ್, ದುಗ್ಗಟ್ಟಿ ರಾಜೇಶ, ಪ್ರಶಾಂತ ಜಯರಾಂ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರಮೂರ್ತಿ, ಪ್ರಸನ್ನ, ಮಹೇಂದ್ರ, ಚಂದ್ರಶೇಖರಯ್ಯ, ವೆಂಕಟೇಶ, ರಕ್ಷಿತ್, ದೀಪಾ ಮತ್ತು ರಾಜ್ಯದ ವಿವಿಧ ಭಾಗದಿಂದ 50ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.