ಗುಂಡ್ಲುಪೇಟೆ; ಬೇಸಿಗೆ ಸಂದರ್ಭದಲ್ಲಿ ವನ್ಯಜೀವಿಗಳ ದಾಹ ತಣಿಸಲು ಅರಣ್ಯ ಇಲಾಖೆ ಈಗಿನಿಂದಲೇ ಕೆರೆಗಳ ಪುನಶ್ಚೇತನಕ್ಕೆ ಸಿದ್ಧತೆ ನಡೆಸಿದ ಪರಿಣಾಮ ಪೂರ್ವ ಮುಂಗಾರಿನಲ್ಲಿಯೇ ಹಲವಾರು ಕೆರೆಗಳು ನೀರು ತುಂಬಿಕೊಳ್ಳುತ್ತಿದ್ದು, ಮುಂಗಾರು ವೇಳೆಗೆ ಭರ್ತಿಯಾಗುವ ಭರವಸೆ ಮೂಡಿಸಿದೆ.
ಜತೆಗೆ ಹೊಸದಾಗಿ ಕೆರೆಗಳಿಗೆ ಸೋಲಾರ್ ಮೋಟಾರ್ ಮೂಲಕ ನೀರು ತುಂಬಿಸುವ ಆಲೋಚನೆ ಹೊಂದಿದ್ದು, ಸ್ವಯಂಸೇವಾ ಸಂಸ್ಥೆಗಳ ನೆರವಿನ ನಿರೀಕ್ಷೆಯಲ್ಲಿದೆ. ಕಳೆದ ವರ್ಷ ಮಳೆಯ ಕೊರತೆ ಹಾಗೂ ಬಿಸಿಲಿನ ತಾಪದಿಂದ ಅರಣ್ಯ ಪ್ರದೇಶದ ಕೆರೆಕಟ್ಟೆಗಳು ಬತ್ತಿಹೋಗಿದ್ದರಿಂದ ಎದುರಾದ ಭೀಕರ ಬರ ಪರಿಸ್ಥಿತಿ ಹಾಹಾಕಾರಕ್ಕೆ ಕಾರಣವಾಗಿತ್ತು.
ಬಂಡೀಪುರದಲ್ಲಿರುವ ಸುಮಾರು 375ಕ್ಕೂ ಹೆಚ್ಚಿನ ಕೆರೆಗಳಲ್ಲಿ ಬಹುಪಾಲು ಕೆರೆಗಳು ನೀರಿಲ್ಲದೆ ಬತ್ತಿಹೋಗಿದ್ದವು. ಸೋಲಾರ್ ಮೋಟಾರ್ ಮೂಲಕ ನೀರು ತುಂಬಿಸುತ್ತಿದ್ದ 57 ಕೆರೆಗಳನ್ನು ಹೊರತುಪಡಿಸಿ ಇನ್ನಾವುದೇ ಕೆರೆಗಳಲ್ಲಿಯೂ ನೀರಿಲ್ಲದಂತಾಗಿತ್ತು. ಕೇರಳದಿಂದ ಹರಿದುಬರುವ ಮೂಲೆ ಹೊಳೆಯೂ ಬತ್ತಿ ಹೋಗಿದ್ದರಿಂದ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿತ್ತು. ಇದರಿಂದ ವನ್ಯಜೀವಿಗಳು ಕುಡಿಯುವ ನೀರು ಹಾಗೂ ಬೇಸಿಗೆಯ ತಾಪ ತಣಿಸಿಕೊಳ್ಳಲು ಪರದಾಡುತ್ತಿದ್ದವು.
ಆನೆ, ಕಾಟಿ ಮುಂತಾದ ವನ್ಯಜೀವಿಗಳು ಕಬಿನಿ ಹಿನ್ನೀರು, ಮಾಯಾರ್ ಕಣಿವೆಗಳತ್ತ ವಲಸೆ ಹೋಗಿದ್ದರೆ, ಜಿಂಕೆ ಮುಂತಾದ ಸಸ್ಯಾಹಾರಿ ಜೀವಿಗಳು ಮೇವು ಹಾಗೂ ಕುಡಿಯುವ ನೀರಿಗೆ ಪಡಿಪಾಟಲು ಪಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸ್ವಲ್ಪ ಪ್ರಮಾಣದಲ್ಲಿ ನೀರಿನ ಸಂಗ್ರಹವಿರುವ ಕೆರೆಗಳಲ್ಲಿ ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳಲು ಹುಲಿಗಳು ಮಲಗಿರುತ್ತಿದ್ದ ಪರಿಣಾಮ ಜಿಂಕೆಗಳು ಹಾಗೂ ಚಿರತೆಗಳು ಅತ್ತ ಸುಳಿಯಲು ಹೆದರುತ್ತಿದ್ದವು. ಕೆಲವು ಕೆರೆಗಳಲ್ಲಿದ್ದ ಕೆಸರು ನೀರನ್ನೇ ಕುಡಿದು ದಾಹ ತಣಿಸಿಕೊಳ್ಳುವಂಥ ದುಸ್ಥಿತಿ ಎದುರಾಗಿತ್ತು.
ಮಾನವ ವನ್ಯಜೀವಿ ಸಂಘರ್ಷ ಹೆಚ್ಚಳ:
ಹುಲಿ ಯೋಜನೆಯ ಓಂಕಾರ್, ಕುಂದಕೆರೆ, ಮದ್ದೂರು, ಮೊಳೆಯೂರು, ಗೋಪಾಲಸ್ವಾಮಿಬೆಟ್ಟ, ಹೆಡಿಯಾಲ ಮುಂತಾದ 10ಕ್ಕೂ ಹೆಚ್ಚಿನ ವಲಯಗಳಲ್ಲಿ ಕೆರೆಗಳಲ್ಲಿ ನೀರು ಬತ್ತಿಹೋಗಿದ್ದರಿಂದ ವನ್ಯಜೀವಿಗಳು ನಾಡಿನತ್ತ ಮುಖ ಮಾಡಿದ್ದವು. ಕಂದಕ ಸೋಲಾರ್ ಬೇಲಿಗಳನ್ನು ನಾಶಪಡಿಸಿ ಆನೆಗಳು ಹೊರಬಂದು ಬೆಳೆ ನಾಶ ಮಾಡುತ್ತಿದ್ದವು. ಇದರಿಂದ ಕಾಡಂಚಿನ ಗ್ರಾಮಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ತಾರಕಕ್ಕೇರಿತ್ತು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬಂಡೀಪುರದ 12 ವಲಯಗಳಲ್ಲಿಯೂ ಹೂಳು ತುಂಬಿಕೊಂಡಿರುವ ಕೆರೆಗಳನ್ನು ಗುರುತಿಸಿ ಜೆಸಿಬಿಗಳ ಮೂಲಕ 52 ಆಯ್ದ ಕೆರೆಗಳ ಹೂಳೆತ್ತಿಸಿತು. ಮಳೆನೀರು ಕೆರೆಗಳಿಗೆ ಸರಾಗವಾಗಿ ಹರಿದು ಬರಲು ಅನುಕೂಲವಾಗುವಂತೆ ಮುಚ್ಚಿಹೋಗಿದ್ದ ಕಾಲುವೆಗಳನ್ನು ಸರಿಪಡಿಸಿ ಕೆರೆಯಿಂದ ಹೊರತೆಗೆದ ಹೂಳನ್ನು ಏರಿಯ ಮೇಲೆ ಹಾಕಿ ಕೆರೆಗಳಲ್ಲಿ ಹೆಚ್ಚಿನ ಮಳೆನೀರು ಸಂಗ್ರಹವಾಗುವಂತೆ ಮಾಡಿದೆ.
ಹೂಳೆತ್ತಿಸಿದ ಕೆರೆಗಳಲ್ಲಿ ನೀರಿನ ಸಂಗ್ರಹ:
ಸದ್ಯ ಬಂಡೀಪುರ ಅರಣ್ಯ ಪ್ರದೇಶಗಳಿಗೆ ಉತ್ತಮ ಮಳೆ ಬಿದ್ದಿರುವ ಪರಿಣಾಮ ಹೂಳೆತ್ತಿಸಿದ ಕೆರೆಗಳಿಗೆ ನೀರು ಹರಿದುಬರುತ್ತಿದೆ. ಏರಿಗಳನ್ನು ಎತ್ತರಿಸಿದ್ದರಿಂದ ಹಿಂದಿಗಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತಿದೆ.
ಓಂಕಾರ್ ವಲಯದ ಆಲದ ಮರದಕಟ್ಟೆ, ಗುರುವೇಗೌಡನಕಟ್ಟೆ, ಅಂಬಯ್ಯನಕಟ್ಟೆ, ಮುತ್ತುಗದಮರದ ಕಟ್ಟೆ, ಚೋಳನಹಳ್ಳಿ ಕೆರೆ, ಕುಂದಕೆರೆ ವಲಯದ ಸಿದ್ದರಾಮನಕಟ್ಟೆ, ದೊಡ್ಡಕೆರೆ, ಗೌಡನಕಟ್ಟೆ, ಈರನಕಟ್ಟೆಗಳ ಹೂಳೆತ್ತಿಸಿದ್ದರಿಂದ ಮಳೆ ನೀರಿನಿಂದ ಕೆಲವೇ ಮಳೆಗೆ ಈ ಕೆರೆಗಳು ಮೈದುಂಬಿಕೊಳ್ಳುತ್ತಿವೆ. ಇನ್ನೇನು ಮುಂಗಾರು ಮಳೆ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಸಂಪೂರ್ಣ ತುಂಬಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಕನಿಷ್ಟ ಒಂದು ವರ್ಷವಾದರೂ ವನ್ಯಜೀವಿಗಳಿಗೆ ಕುಡಿವ ನೀರಿನ ಕೊರತೆ ನೀಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ಬಂಡೀಪುರದ ಕೆರೆಗಳಲ್ಲಿ ನೀರಿನ ಸಂಗ್ರಹವಿಲ್ಲದೆ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಪ್ರತಿ ವಲಯದಲ್ಲಿಯೂ ನಾಲ್ಕೈದು ಕೆರೆಗಳನ್ನು ಆಯ್ಕೆ ಮಾಡಿ ಮಳೆಗಾಲದಲ್ಲಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳಲು ಅನುಕೂಲವಾಗುವಂತೆ ಹೂಳೆತ್ತಿಸಿ ನೀರು ಹರಿದು ಬರುವ ಕಾಲುವೆಗಳನ್ನು ಸರಿಪಡಿಸಲಾಗಿದೆ. ಇದರಿಂದ ಈಗಾಗಲೇ ಕೆಲವು ಕೆರೆಗಳಿಗೆ ಮಳೆ ನೀರು ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಹಕಾರದಿಂದ ಇನ್ನೂ ಹಲವಾರು ಕೆರೆಗಳಿಗೆ ಸೋಲಾರ್ ಮೋಟಾರ್ ಅಳವಡಿಸಲು ಉದ್ದೇಶಿಸಲಾಗಿದೆ.ಪ್ರಭಾಕರನ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ.