ಚಾಮರಾಜನಗರ : ಬರಗಾಲದಿಂದ ತತ್ತರಿಸಿರುವ ರೈತರು ಕೃಷಿ ಚಟುವಟಿಕೆ ಮಾಡಲು ಸಂಕಷ್ಟ ಪಡುತ್ತಿರುವಾಗಲೇ ರಾಜ್ಯ ಸರ್ಕಾರ ಸಹಾಯಧನ ರೂಪದಲ್ಲಿ ನೀಡುವ ಬಿತ್ತನೆ ಬೀಜದ ಬೆಲೆಗಳನ್ನು ದುಪ್ಪಟ್ಟು ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ 223 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, 70 ಲಕ್ಷ ರೈತರ ಪೈಕಿ 27 ಲಕ್ಷ ರೈತರಿಗೆ 500-1000 ರೂ. ಭಿಕ್ಷಾ ರೂಪದ ಬರ ಪರಿಹಾರ ನೀಡಿದ್ದಾರೆ. ಸಂಕಷ್ಟದಲ್ಲಿರುವ ರೈತರ ಹಿತ ಕಾಯಬೇಕಾದ ಸರ್ಕಾರ, ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಿ ಈಗ ಸಮರ್ಥನೆ ಮಾಡಿಕೊಳ್ಳುತ್ತಿದೆ. ಸರ್ಕಾರದ ನಿರ್ಧಾರ ವಾಪಸ್ ಪಡೆಯದಿದ್ದರೆ ರೈತರು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ರೈತ ಸಂಘದ ಕಾರ್ಯಕರ್ತ ಎಂದು ಹೇಳುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ಕಿಸಾನ್ ಸಮ್ಮಾನ್ ಯೋಜನೆಯ 4 ಸಾವಿರ ರೂ.ಗಳನ್ನು ನಿಲ್ಲಿಸಿದರು. ರೈತರ ಮಕ್ಕಳ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಿದರು. ಕಳೆದ ಎಂಟು ತಿಂಗಳಿಂದ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹ ಧನ 750 ಕೋಟಿ ರೂ. ಇನ್ನೂ ಬಿಡುಗಡೆ ಮಾಡಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯಲು 2 ಲಕ್ಷ ರೂ. ಖರ್ಚು ಮಾಡಬೇಕಾದ ನಿಯಮ ಜಾರಿ ಮಾಡಿ ಆಘಾತ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಿ, ಬೆಳೆ ನಷ್ಟದ ಸಂಪೂರ್ಣ ಹಣ ನೀಡಬೇಕು. ಇಲ್ಲವೇ ಮಳೆ ಹಾನಿಯಿಂದ ನಷ್ಟ ಅನುಭವಿಸುವ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವ ನೀತಿ ಜಾರಿಗೆ ತರಬೇಕು. ಬರ ಪರಿಹಾರ ನಷ್ಟದಲ್ಲಿ ಕಬ್ಬಿನ ಬೆಳೆಯನ್ನು ಪರಿಗಣಿಸಬೇಕು. ಕಬ್ಬು ಬೆಳೆ ನಾಶವಾಗಿರುವ ರೈತರಿಗೂ ಬರ ಪರಿಹಾರ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಸತೀಶ್, ಹೆಗ್ಗೋಠಾರ ಶಿವಸ್ವಾಮಿ, ಎಂ.ಬಿ.ರಾಜು, ಮಾದೇಶ್, ಸುಂದ್ರಪ್ಪ ಹಾಜರಿದ್ದರು.