ಜಿಲ್ಲೆ

ಕೆನ್ನಾಯಿ ಜೀವಕ್ಕೆ ಆಪತ್ತು

ಕಿರಣ್ ಮಾದರಹಳ್ಳಿ

ಕಿರಣ್ ಮಾದರಹಳ್ಳಿ ಚಾಮರಾಜನಗರ
ವನ್ಯಜೀವಿ ಲೋಕದಲ್ಲಿ ಹುಲಿ, ಚಿರತೆ, ಆನೆ, ಜಿಂಕೆ ಪ್ರಾಣಕ್ಕೆ ಕುತ್ತು ಬರುತ್ತಿರುವುದಷ್ಟೇ ಅಲ್ಲ, ಅಳಿವಿನಂಚಿನಲ್ಲಿರುವ ಕೆನ್ನಾಯಿಗಳ ಜೀವಕ್ಕೂ ಆಪತ್ತು ಆವರಿಸುತ್ತಿದೆ.

ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆ ಕಾಡುನಾಯಿ ಅಥವಾ ಸೀಳುನಾಯಿ ಎಂದು ಕರೆಯಲ್ಪಡುವ ಕೆನ್ನಾಯಿಗಳ ಆವಾಸ ಸ್ಥಾನ. ಬಂಡೀಪುರ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಮಲೆ ಮಹದೇಶ್ವರಬೆಟ್ಟ ಮತ್ತು ಕಾವೇರಿ ವನ್ಯಜೀವಿ ಧಾಮಗಳಲ್ಲಿ ಕೆನ್ನಾಯಿಗಳು ವಾಸ ಮಾಡುತ್ತಿವೆ. ಇಲ್ಲಿ ಆಗಾಗ್ಗೆ ಕೆನ್ನಾಯಿ ಸಾವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೊಳ್ಳೇಗಾಲ ತಾಲೂಕಿನಲ್ಲಿ ಕುಣಗಳ್ಳಿ-ಹಿತ್ತಲದೊಡ್ಡಿ ಗ್ರಾಮದ ರಸ್ತೆಯಲ್ಲಿ 7 ಕೆನ್ನಾಯಿಗಳು ಮೃತಪಟ್ಟಿವೆ.

ಇಷ್ಟು ದಿನ ಹುಲಿ, ಚಿರತೆ, ಆನೆ, ಜಿಂಕೆ ಸಾವಿನ ಸುದ್ದಿಗಳು ಸದ್ದು ಮಾಡುತ್ತಿದ್ದವು. ವನ್ಯಜೀವಿ ಸಂರಕ್ಷಣೆ ಎಂದರೆ ಮೇಲ್ಮುಖವಾಗಿ ಇವುಗಳ ಸಂರಕ್ಷಣೆ ಎನ್ನುವಂತೆಯೇ ಆಗಿತ್ತು. ಆದರೆ ಕೆನ್ನಾಯಿಗಳಂತಹ ಸೂಕ್ಷ್ಮಪ್ರಾಣಿಗಳ ರಕ್ಷಣೆಯೂ ಅಗತ್ಯ ಎನ್ನುವುದನ್ನು ಕೊಳ್ಳೇಗಾಲದಲ್ಲಿ ಕೆನ್ನಾಯಿ ಸಾವು ಪ್ರಕರಣ ಬಿಚ್ಚಿಟ್ಟಿದೆ.

ಕಾಡಿನಲ್ಲಿ ಕೆನ್ನಾಯಿಗಳು: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಸಾರಿಗೆ ಹೋಗುವ ಪ್ರವಾಸಿಗರಿಗೆ ಕೆನ್ನಾಯಿಗಳು ಕಾಣಸಿಗುತ್ತವೆ. 5 ರಿಂದ 10 ಕೆನ್ನಾಯಿಗಳ ಒಂದು ಗುಂಪು ಇರುತ್ತವೆ. ನಾಯಿಗಳನ್ನೇ ಹೋಲುವುದರಿಂದ ಈ ಜೀವಿಗಳು ಗಮನ ಸೆಳೆಯುವುದು ಕಡಿಮೆಯಾದರೂ ಇವು ವನ್ಯಜೀವಿ ತಜ್ಞರ ಕೇಂದ್ರ ಬಿಂದುವಾಗಿದೆ.
ಕೆನ್ನಾಯಿಗಳ ಕುರಿತು ಅಧ್ಯಯನ: ವನ್ಯಜೀವಿ ತಜ್ಞರಾದ ಕೃಪಾಕರ-ಸೇನಾನಿ ಹಲವು ವರ್ಷಗಳ ಕಾಲ ಕೆನ್ನಾಯಿಗಳ ಕುರಿತು ಅಧ್ಯಯನ ಮಾಡಿದ್ದಾರೆ. ಇವರದಲ್ಲದೆ ಕೇರಳದ ಯೂನಿವರ್ಸಿಟಿಯ ವಿಜ್ಞಾನಿಗಳು ಕೆನ್ನಾಯಿಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇವುಗಳ ಸಂತತಿ ರಕ್ಷಣೆಯ ಕುರಿತು ಗಮನ ಸೆಳೆದಿದ್ದಾರೆ. ಇದಕ್ಕೂ ಮೊದಲು ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ಕೆನ್ನಾಯಿಗಳ ಬಗ್ಗೆ ಕಾರ್ಯಕ್ರಮ ಬಿತ್ತರಿಸಿತ್ತು.

ಗ್ರೀನ್ ಆಸ್ಕರ್ ಪ್ರಶಸ್ತಿ: ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಸುಮಾರು 16 ವರ್ಷಗಳ ಕಾಲ ಕೆನ್ನಾಯಿಗಳ ಕುರಿತು ಅಧ್ಯಯನ ನಡೆಸಿ ‘ದಿ ಪ್ಯಾಕ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದರು. ಈ ಸಾಕ್ಷ್ಯ ಚಿತ್ರಕ್ಕೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿ ಬಂದಿತ್ತು.

ಪ್ರಾಣಾಪಾಯದಲ್ಲಿ ಸಂತತಿ:
ಹಲವು ವರ್ಷಗಳ ಹಿಂದೆಯೇ ಸೀಳುನಾಯಿಗಳು ಪ್ರಾಣಾಪಾಯವನ್ನು ಎದುರಿಸಿವೆ. ಇವು ಹುಲಿ, ಚಿರತೆಗಳ ಆಹಾರವನ್ನು ಕೆನ್ನಾಯಿಗಳು ಬೇಟೆಯಾಡುತ್ತವೆ ಎಂಬ ಕಾರಣಕ್ಕೆ ಬ್ರಿಟೀಷರು ಇವುಗಳನ್ನು ನಾಶಪಡಿಸಲು ಮುಂದಾಗಿದ್ದರು ಎನ್ನಲಾಗಿದೆ. ಜನರೂ ಇವುಗಳನ್ನು ಬೇಟೆಯಾಡುತ್ತಿದ್ದರು. 1973ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಮೇಲೆ ಕೆನ್ನಾಯಿಗಳನ್ನು ಕೊಲ್ಲುವುದಕ್ಕೆ ತಡೆ ಬಿತ್ತು. ಆದರೂ ಕೆನ್ನಾಯಿಗಳ ಸಾವು ಪ್ರಕರಣಗಳು ವರದಿಯಾಗುತ್ತಿವೆ.

ಕಾಡಿನಿಂದ ನಾಡಿಗೆ:
ಹುಲಿ, ಚಿರತೆ, ಜಿಂಕೆ, ಆನೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ, ಕಾಂಚಿನ ಗ್ರಾಮಗಳಿಗೆ ಬರುವಂತೆಯೇ ಕೆನ್ನಾಯಿಗಳೂ ಬರುತ್ತಿವೆ ಎನ್ನುವುದು ಖಚಿತವಾಗಿದೆ. ಕೊಳ್ಳೇಗಾಲದಲ್ಲಿ ಮಂಗಳವಾರ ಕೆನ್ನಾಯಿಗಳ ಸಾವು ಪ್ರಕರಣ ಇದಕ್ಕೆ ಪುಷ್ಟಿ ನೀಡಿದೆ. ಕುಣಗಳ್ಳಿ-ಹಿತ್ತಲದೊಡ್ಡಿ ಗ್ರಾಮ ಸಮೀಪದ ಸರ್ಕಾರಿ ಜಾಗದಲ್ಲಿ ಸೀಳುನಾಯಿಗಳ ಕಳೇಬರ ಪತ್ತೆಯಾಗಿದೆ. ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಗೆ ಬರುವ ಗ್ರಾಮದ ಸುತ್ತಮುತ್ತ ಕೆನ್ನಾಯಿಗಳ ಸಂಚಾರ ಈ ಮೊದಲೇ ಇತ್ತು ಎನ್ನಲಾಗಿದೆ.
ಸಂಘರ್ಷ: ಮಾನವ-ವನ್ಯಜೀವಿ ಸಂಘರ್ಷದಲ್ಲಿ ಕೆನ್ನಾಯಿಗಳೂ ಸೇರಿಕೊಂಡಿವೆ. ಎಲ್ಲಾದರೂ ಕುರಿ, ಮೇಕೆಗಳ ಬಲಿಯಾದರೆ ಹುಲಿ ಅಥವಾ ಚಿರತೆ ದಾಳಿ ಮಾಡಿರಬಹುದೆಂದು ಊಹೆ ಮಾಡಲಾಗುತ್ತದೆ. ಇವುಗಳ ಮೇಲಿನ ದ್ವೇಷದಿಂದ ಕೈಗೊಳ್ಳುವ ಕೃತ್ಯಗಳು ಕೆನ್ನಾಯಿಗಳ ಮೇಲೆ ಪರಿಣಾಮವನ್ನು ಬೀರುವುದೂ ಉಂಟು.

ತನ್ನದೇ ದಿನಾಚರಣೆಯಂದು ‘ಸಾವು’
‘ಕೆನ್ನಾಯಿ ದಿನ’ದಂದೇ ಕೊಳ್ಳೇಗಾಲದಲ್ಲಿ ಇವುಗಳ ಸಾವಿನ ಸುದ್ದಿ ಬೆಳಕಿಗೆ ಬಂದಿದೆ. ಮೇ 28 ವಿಶ್ವ ಕೆನ್ನಾಯಿಗಳ ದಿನ. ಕಾಡುನಾಯಿ, ಸೀಳುನಾಯಿ ಅಥವಾ ಏಷಿಯಾಟಿಕ್ ವೈಲ್ಡ್ ಡಾಗ್ ಎಂದು ಕರೆಯಲ್ಪಡುವ ತೋಳ ಜಾತಿಯ ಈ ಪ್ರಾಣಿ ಹುಲಿಗಳಿಗಿಂತಲೂ ಹೆಚ್ಚು ಅಳಿವಿನಿಂಚಿನಲ್ಲಿವೆ.

ನಮ್ಮ ಅರಣ್ಯದಲ್ಲಿ ಕೆನ್ನಾಯಿಗಳ ಗುಂಪುಗಳಿವೆ. ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಕೆನ್ನಾಯಿಗಳ ಸಾವಿಗೆ ಕಾರಣವಾಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.ಸಂತೋಷ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಲೆಮಹದೇಶ್ವರ ವನ್ಯಜೀವಿಧಾಮ