ಕೊಳ್ಳೇಗಾಲ: ತಾಲೂಕಿನ ಗ್ರಾಮವೊಂದರಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮನೆಗೆ ಕರೆಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯೊಬ್ಬನನ್ನು ಬುಧವಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೀರಭದ್ರ ಅಲಿಯಾಸ್ ಪೈಕಾನಿ(40) ಬಂಧಿತ ಆರೋಪಿ. 9 ವರ್ಷದ ಬಾಲಕಿಯನ್ನು ಮನೆಗೆ ಕರೆಸಿಕೊಂಡು ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೂಲಿ ಕೆಲಸಕ್ಕೆ ತೆರಳಿದ್ದ ಪಾಲಕರು ಮನೆಗೆ ಹಿಂದಿರುಗಿ ಬಂದಾಗ ಅಳುತ್ತ ಕುಳಿತ್ತಿದ್ದ ಬಾಲಕಿಯಿಂದ ಮಾಹಿತಿ ಪಡೆದರು. ಬಾಲಕಿಯನ್ನು ಕೊಳ್ಳೇಗಾಲ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ದಾಖಲಿಸಿದಾಗ ಈ ಬಗ್ಗೆ ವೈದ್ಯರು ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಿದರು. ವಿಚಾರ ತಿಳಿದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮಸ್ಥರಿಂದ ಧರ್ಮದೇಟು: ಈ ಕೃತ್ಯ ಬಗ್ಗೆ ತಿಳಿದ ಗ್ರಾಮಸ್ಥರು ಆರೋಪಿ ವೀರಭದ್ರನಿಗೆ ಧರ್ಮದೇಟು ನೀಡಿದ್ದಾರೆ. ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.