ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹೊಸ ಸಂಪರ್ಕವನ್ನು ಪಡೆಯಲು ರೈತರೇ ಪೂರ್ಣವೆಚ್ಚವನ್ನು ಭರಿಸಬೇಕು ಎಂಬ ಆದೇಶವನ್ನು ಹಿಂಪಡೆಯುವಂತೆ ಹಾಗೂ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಪ್ರವಾಸಿಮಂದಿರದ ಬಳಿ ಮಂಗಳವಾರ ಜಮಾಯಿಸಿದ ನೂರಾರು ರೈತ ಹೋರಾಟಗಾರರು ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ, ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಕೃಷಿ ಪಂಪ್‌ಸೆಟ್‌ಗಳ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಅಧಿಕೃತಗೊಳಿಸಲು ಹಾಗೂ ಹೊಸ ಸಂಪರ್ಕವನ್ನು ಪಡೆಯಲು ರೈತರೇ ಪೂರ್ಣ ವೆಚ್ಚವನ್ನು ಭರಿಸಬೇಕೆಂದು ಹೊರಡಿಸಿರುವ ಆದೇಶವನ್ನು ಕೂಡಲೇ ಕೈಬಿಟ್ಟು ಸಾಂಕೇತಿಕ ಮೊತ್ತವನ್ನು ಪಡೆದು ಸಂಪರ್ಕವನ್ನು ಕಲ್ಪಿಸಬೇಕು. ರಾಜ್ಯದಲ್ಲಿ ತಲೆದೋರಿರುವ ಬರಗಾಲಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯ ಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ರೈತರಿಗೆ ಪೂರ್ಣ ನಷ್ಟ ಪರಿಹಾರವನ್ನು ತುಂಬಿಕೊಡಬೇಕು ಎಂದು ಆಗ್ರಹಿಸಿದರು.
ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವ ನೀತಿ ಜಾರಿಯಾಗುವವರೆಗೂ ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ, ಎಲ್ಲ ಬೆಳೆಗಳನ್ನು ಸಕಾಲದಲ್ಲಿ ಖರೀದಿಸಬೇಕು. ಕಳೆದ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಕೊಡಬೇಕಾಗಿರುವ ಉಪ ಉತ್ಪನ್ನಗಳ ಬಾಕಿ ಪ್ರತಿ ಟನ್‌ಗೆ 150 ರೂ. ಶೀಘ್ರ ಜಮಾಗೊಳಿಸಬೇಕು. ಈ ಸಾಲಿನಲ್ಲಿ ಕಬ್ಬಿಗೆ ಟನ್ ಒಂದಕ್ಕೆ 5000 ರೂ. ಬೆಲೆ ನಿಗದಿ ಮಾಡಬೇಕು ಎಂದರು.

ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ವನ್ಯ ಜೀವಿಗಳಿಂದ ರೈತರಿಗೆ ಉಂಟಾಗುವ ಬೆಳೆ, ಆಸ್ತಿ, ಪ್ರಾಣಹಾನಿಗೆ ಹೆಚ್ಚಿನ ಪರಿಹಾರವನ್ನು ಸಕಾಲದಲ್ಲಿ ಪಾವತಿಸಬೇಕು. ವನ್ಯಜೀವಿಗಳಿಂದ ಸಾವಿಗೀಡದ ಕುಟುಂಬದ ಒಬ್ಬ ಸದಸ್ಯರಿಗೆ ಕಾಯಂ ಉದ್ಯೋಗ ದೊರಕಿಸಿಕೊಡಬೇಕು. ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು ಎಂದು ಒತ್ತಾಯಿಸಿದರು.

ವನ್ಯಜೀವಿಗಳಿಂದ ಸತ್ತ ಜಾನುವಾರುಗಳಿಗೂ ಸೂಕ್ತ ಪರಿಹಾರ ನೀಡಬೇಕು. ರೈತರು ಅರಣ್ಯ ಪ್ರದೇಶಗಳ ವ್ಯಾಪ್ತಿಯಿಂದ ದೂರವಿರುವ ಕೃಷಿ ಭೂಮಿಗಳಿಗೂ ಸಹ ವನ್ಯಜೀವಿಗಳಿಂದ ಬೆಳೆಗಳ ರಕ್ಷಣೆಗಾಗಿ ಸೋಲಾರ್ ತಂತಿಬೇಲಿಗಳ ನಿರ್ಮಾಣಕ್ಕೆ ಸಹಾಯಧನ ನೀಡಬೇಕು. ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಸಾಗುವಾನಿ ಮರಗಳನ್ನು ಕಟಾವು ಮಾಡುವ ಅನುಮತಿಯನ್ನು ಸರಳೀಕರಣ ಮಾಡಬೇಕು. ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೂಡು, ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಸಿ. ಭಾಸ್ಕರ್, ಮುಖಂಡರಾದ ಉಗ್ರ ನರಸಿಂಹೇಗೌಡ, ಅಭಿರುಚಿ ಗಣೇಶ್, ರವಿಕಿರಣ್, ಲಿಂಗಪ್ಪಾಜಿ, ಪ್ರಕಾಶ್, ರವಿಕುಮಾರ್, ಜಿಲ್ಲಾಧ್ಯಕ್ಷೆ ಮಾದಮ್ಮ ಹಾಗೂ ಇತರರು ಭಾಗವಹಿಸಿದ್ದರು.