ಚಾಮರಾಜನಗರ: ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ, 100 ಕೋಟಿ ರೂ. ಅನುದಾನವನ್ನು ಮೀಸಲಿಡಬೇಕು ಎಂದು ಚಾಮರಾಜನಗರ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು ಒತ್ತಾಯಿಸಿದರು.
ರಾಜ್ಯದಲ್ಲಿ 15 ವರ್ಷಗಳ ಹಿಂದೆಯೇ ಉಪ್ಪಾರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲಾಗಿದೆ. ಆದರೆ ನಿಗಮದಿಂದ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದೇ ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರವು ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅನುದಾನ ನೀಡುವ ಮೂಲಕ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ 30 ಲಕ್ಷಕ್ಕಿಂತಲೂ ಹೆಚ್ಚು ಉಪ್ಪಾರ ಜನಸಂಖ್ಯೆ ಇದೆ. ಈ ಜನಾಂಗವು ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ತೀರ ಹಿಂದುಳಿದ ಜನಾಂಗವಾಗಿದೆ. ಪ್ರಸ್ತುತ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ್ಪಾರ ಜನಾಂಗದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಸಮುದಾಯದವರಿಗೆ ರಾಜಕೀಯ ಪ್ರಾಧಾನ್ಯತೆ, ಉಪ್ಪಾರ ಅಭಿವೃದ್ಧಿ ನಿಗಮದ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ ಎಂದರು.
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ 1.50 ಲಕ್ಷ ಉಪ್ಪಾರ ಮತದಾರರಿದ್ದಾರೆ. ಜಿಲ್ಲೆಯ ಉಪ್ಪಾರ ಜನಾಂಗದವರು ವಾಸ ಮಾಡುವ ಗ್ರಾಮ, ಪಟ್ಟಣಗಳಿಗೆ ಸರ್ಕಾರ ವಿಶೇಷ ಅನುದಾನದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಇದಕ್ಕಾಗಿ 100 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಬೇಕು. ಅಲ್ಲದೆ ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಉಪ್ಪಾರ ಜನಾಂಗಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ಆರ್.ಮಹದೇವಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್.ಮಹದೇವಸ್ವಾಮಿ, ಮುಖಂಡ ಕೆಂಪನಪುರ ಮಹದೇವಶೆಟ್ಟಿ ಹಾಜರಿದ್ದರು.