ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಆರವನಪುರದ ಬೀದಿಯ ನಿವಾಸಿಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲಾಗುತ್ತಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಆರವನಪುರದ 2 ಕುಡಿಯುವ ನೀರಿನ ಬೋರ್‌ವೆಲ್‌ಗಳು ಕಲುಷಿತಗೊಂಡಿದ್ದವು. ಪರಿಣಾಮ ಈ ನೀರು ಉಪಯೋಗಿಸಿದ 15ಕ್ಕೂ ಹೆಚ್ಚು ಜನರಿಗೆ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡು ಕೊಳ್ಳೇಗಾಲ ಪಟ್ಟಣ ಸೇರಿದಂತೆ ಮೈಸೂರು, ಚಾಮರಾಜನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾನುವಾರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಹಾಗೂ ಚಿಕಿತ್ಸೆ ಪಡೆದು ಗ್ರಾಮಕ್ಕೆ ಹಿಂದಿರುಗಿದ್ದವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಅಂತೆಯೆ, ಹನೂರು ಶಾಸಕ ಆರ್.ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ ಅವರು ಅಸ್ವಸ್ಥರ ಭೇಟಿ ಮಾಡಿ ಧೈರ್ಯ ತುಂಬಿದ್ದರು.
ಈ ವೇಳೆ ಜಿಲ್ಲಾದಿಕಾರಿ ಶಿಲ್ಪಾನಾಗ್ ಅವರು ತಾಲೂಕು ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಅವರಿಗೆ ಬೋರ್‌ವೆಲ್ ದುರಸ್ತಿ ಆಗುವವರೆಗೆ ಜನರ ಬಳಕೆಗೆ ನೀರಿನ ವ್ಯವಸ್ಥೆಯನ್ನು ಟ್ಯಾಂಕರ್ ಮೂಲಕ ಹೊರಗಿನಿಂದ ಪೂರೈಸುವಂತೆ ಸೂಚನೆ ನೀಡಿದ್ದರು. ಅಲ್ಲದೆ, ಬೋರ್‌ವೆಲ್ ಪಕ್ಕದಲ್ಲಿದ್ದ ಹರಿಯುವ ಚರಂಡಿ ಸ್ವಚ್ಛಗೊಳಿಸಿವುದು ಹಾಗೂ ಬಡಾವಣೆಯ ತಾಜ್ಯವನ್ನು ತೆರವು ಮಾಡಿ ಸ್ವಚ್ಛಗೊಳಿಸುವಂತೆ ಖಡಕ್ ಸೂಚನೆ ನೀಡಿದರು.
ಇದರಿಂದ ಎಚ್ಚೆತ್ತ ಗ್ರಾಪಂ ಅಧಿಕಾರಿಗಳು ಭಾನುವಾರದಿಂದ ಆರವನಪುರಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ ಹಾಗೂ ಬೋರ್‌ವೆಲ್ ಸಮೀಪ ಹರಿಯುತ್ತಿದ್ದ ಚರಂಡಿಯಲ್ಲಿ ನೀರು ನಿಲ್ಲದಂತೆ ಚರಂಡಿ ತ್ಯಾಜ್ಯವನ್ನು ತೆರವುಗೊಳಿಸಿ ನೀರು ಸರಾಗವಾಗಿ ಅರಿಯುವಂತೆ ಕ್ರಮ ಕೈಗೊಂಡಿದ್ದಾರೆ.
ಆಟೋ ಪ್ರಚಾರ: ಆರೋಗ್ಯ ಇಲಾಖೆ ಮತ್ತು ಪಂಚಾಯಿತಿ ಕಡೆಯಿಂದ ಗ್ರಾಮದಲ್ಲಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ರಾತ್ರಿ ಶೇಖರಿಸಿಟ್ಟ ನೀರನ್ನು ಬೆಳಗ್ಗೆ ಉಪಯೋಗಿಸಬಾರದು, ಹೊಸದಾಗಿ ನೀರು ಸಂಗ್ರಹಿಸಿ, ಉಪಯೋಗಿಸಬೇಕು ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಕುಡಿಯಲು ಬಳಸಿಕೊಳ್ಳಬೇಕೆಂದು ಆಟೋದಲ್ಲಿ ಧ್ವನಿವರ್ಧಕದ ಮೂಲಕ ಅರಿವು ಮೂಡಿಸಿದ್ದಾರೆ.